ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಮರು ಜೀವ ಬಂದಿದ್ದು, ಇದೀಗ ದಿನಕ್ಕೊಂದು ರುಚಿಕರ ಆಹಾರ ಜನರಿಗೆ ದೊರಕುವಂತೆ ಮಾಡಲು ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಗುಣಮಟ್ಟ ಹಾಗೂ ಆಹಾರ ಬಗೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಬಿಎಂಪಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿದೆ. ಇದರಲ್ಲಿ ಹತ್ತಕ್ಕೂ ಅಧಿಕ ರುಚಿಕರ ಆಹಾರಗಳನ್ನು ಪಟ್ಟಿ ಮಾಡಿಕೊಂಡಿದೆ.
ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬಗೆ ಬಗೆಯ ಆಹಾರ ಕ್ಯಾಂಟೀನ್ ನಲ್ಲಿ ದೊರಕಬೇಕು. ಈ ನಿಟ್ಟಿನಲ್ಲಿ ವಿವಿಧ ಖಾದ್ಯಗಳನ್ನು ಕಡಿಮೆ ದರದಲ್ಲಿ ನೀಡಬಹುದು ಎಂದು ಪಾಲಿಕೆ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಲು ತೀರ್ಮಾನಿಸಿದೆ.
163 ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿ: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಅಂದಾಜು 175 ಇಂದಿರಾ ಕ್ಯಾಂಟೀನ್ ಪೈಕಿ 163 ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿವೆ. ಸದ್ಯ ಕ್ಯಾಂಟೀನ್ ಮರುಜೀವ ನೀಡುವ ಯೋಜನೆಯ ಹಿನ್ನೆಲೆ ನಗರದ ಬಹುತೇಕ ಕಡೆಗಳಲ್ಲಿ ಕ್ಯಾಂಟೀನ್ ಆವರಣಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಅಧಿಕಾರಿಗಳಿಂದ ಪರಿಶೀಲನೆ: ವಲಯ ಆಯುಕ್ತರು, ಜಂಟಿ ಆಯುಕ್ತರು, ಅಭಿಯಂತರರು, ಆರೋಗ್ಯಾಧಿಕಾರಿಗಳು ವಲಯವಾರು ಇಂದಿರಾ ಕ್ಯಾಂಟೀನ್ ಸ್ಥಿತಿ ಗತಿಯನ್ನು ಪರಿಶೀಲಿಸುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಧಿಕಾರ ಹಂಚಿಕೆ: ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯವಾರು ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ಸಂಬಂಧಪಟ್ಟ ವಲಯ ಆಯುಕ್ತರು, ಜಂಟಿ ಆಯುಕ್ತರುಗಳಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗುವುದು ಎಂದು ತಿಳಿಸಿದರು. ಎಲ್ಲ ವಲಯ ಆಯುಕ್ತರು ವಲಯವಾರು ತಂಡಗಳನ್ನು ರಚಿಸಿ ಘನತ್ಯಾಜ್ಯ ವಿಭಾಗ, ಪೌರಕಾರ್ಮಿಕರು, ಇತರ ಸಿಬ್ಬಂದಿ ಮುಖಾಂತರ ಇಂದಿರಾ ಕ್ಯಾಂಟೀನ್ ಸ್ವಚ್ಚತಾ ಕಾರ್ಯ ನಡೆಸಲು ಸೂಚಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಇಂದಿರಾ ಕ್ಯಾಂಟೀನ್, ಬೇಸ್ ಕ್ಯಾಂಟೀನ್ ಸ್ಥಾಪನೆಗೆ ಹಾಗೂ ಆಹಾರ ಪೂರೈಕೆಗೆ ನಿರ್ವಹಣೆಗೆ ಹೊಸ ಪ್ರಸ್ತಾವನೆ ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.
ಹೆಚ್ಚುವರಿಯಾಗಿ ವಾರ್ಡ್ಗಳ ಅನುಕೂಲಕ್ಕೆ ತಕ್ಕಂತೆ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಹಾಗೂ ಮೊಬೈಲ್ ಕ್ಯಾಂಟೀನ್ ಗೆ ಮರು ಚಾಲನೆ ವರದಿ ನೀಡಲು ಎಲ್ಲ ವಲಯ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಪುನಾರಂಭಿಸಲು ಸೂಚನೆ: ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಯೋಜನೆ ಆಗಿದ್ದ 'ಇಂದಿರಾ ಕ್ಯಾಂಟೀನ್ಗಳನ್ನು ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನ ಪೂರೈಕೆ ನಿಲ್ಲಿಸಿತ್ತು. ಅದಕ್ಕೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಮತ್ತೆ ಕಾಂಗ್ರೆಸ್ 2023ರ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಪುನಾರಂಭಿಸುವಂತೆ ಬಿಬಿಎಂಪಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿದೆ.
ಇದೀಗ 'ಇಂದಿರಾ ಕ್ಯಾಂಟೀನ್'ಗಳಿಗೆ ಮರುಜೀವ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಕೋಣೆಗಳನ್ನು ಕೂಲಂಕಷವಾಗಿ ಪರಿಶೀಲನೆ ಹಾಗೂ ಮೊದಲಿನಂತೆ ಬಡವರಿಗೆ ಕಡಿಮೆ ಬೆಲೆ ಆಹಾರ ತಯಾರಿಸಿ ನೀಡಲು ಸಜ್ಜುಗೊಳಿಸಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.
ಇದನ್ನೂಓದಿ:ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ದಾವಣಗೆರೆ ಇಂದಿರಾ ಕ್ಯಾಂಟಿನ್ಗಳಿಗೆ ಜೀವಕಳೆ.. ಬೆಣ್ಣೆ ನಗರಿ ಜನ ಖುಷ್ !