ಬೆಂಗಳೂರು: ಬಿಬಿಎಂಪಿ ಬಜೆಟ್ ಇಂದು ಮಂಡನೆಯಾಗಿದ್ದು, ನಿರೀಕ್ಷೆಯಂತೆ ಸಂಪನ್ಮೂಲ ಕ್ರೋಢೀಕರಣಕ್ಕೆ ಬಿ ಖಾತಾ ರದ್ದು ಮಾಡಿ, ಎ ಖಾತಾ ನೀಡುವ ಬಗ್ಗೆ ಘೋಷಣೆಯಾಗುವ ನಿರೀಕ್ಷೆಯಿತ್ತು.
ಅದರಂತೆ ಸ್ಪಷ್ಟನೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಸರ್ಕಾರದ ಕಂದಾಯ ಇಲಾಖೆಯ ಸಹಕಾರದೊಂದಿಗೆ 'ಬಿ' ವಹಿಯಲ್ಲಿ ದಾಖಲಿಸುವ ಪದ್ಧತಿ ರದ್ದುಗೊಳಿಸಲಾಗುವುದು ಎಂದರು.
ಓದಿ: ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಐದೇ ದಿನ ಬಾಕಿ
ಬಿ ಖಾತಾವನ್ನು ಕೂಡಾ ಎ ಖಾತಾಗೊಳಿಸಲಾಗುತ್ತದೆ. ಸುಪ್ರೀಂಕೋರ್ಟ್ ವಿಚಾರಣೆಯಲ್ಲಿರೋದು ಈಗಾಗಲೇ ನಿಯಮಬಾಹಿರವಾಗಿ ಕಟ್ಟಿರುವ ಕಟ್ಟಡಗಳ ಅಕ್ರಮ-ಸಕ್ರಮ ಬಿಲ್ಡಿಂಗ್ ಗಳಿಗೆ ಅನ್ವಯಿಸುತ್ತದೆ. ಆದರೆ ಖಾಲಿ ಸೈಟ್ ಗಳಲ್ಲಿ ಕಟ್ಟುವ ಮನೆಗಳಿಗೆ ಕನ್ವರ್ಷನ್, ಲೇಔಟ್ ಪ್ಲಾನ್ ಗಳ ನಿಯಮಾವಳಿಗಳು ರಾಜ್ಯ ಮಟ್ಟದಲ್ಲಿ ತೀರ್ಮಾನ ಆಗುತ್ತದೆ.
2007ಕ್ಕೆ ಮೊದಲು ಬಿ ಖಾತಾ ಇರಲಿಲ್ಲ. 110 ಹಳ್ಳಿಗಳು ಸೇರ್ಪಡೆಯಾದ ನಂತರ ಜಾಗದ ಕನ್ವರ್ಷನ್ ನಿಯಮಗಳು ಅಂತಿಮಗೊಳ್ಳದೆ ಅನೇಕ ಜನ ಮನೆ, ಕಟ್ಟಡ ಕಟ್ಟಿಕೊಂಡಿದ್ದಾರೆ. ದಾಖಲೆಗಾಗಿ ಬಿ ವಹಿಯಲ್ಲಿ ದಾಖಲಿಸಿಕೊಳ್ಳಲಾಗ್ತಿದೆ. ಆದರೆ ಎ ಖಾತಾ ನೀಡದಿರುವುದರಿಂದ ಪಾಲಿಕೆಗೂ ಆಸ್ತಿ ತೆರಿಗೆ ಪಾವತಿಯಾಗುತ್ತಿಲ್ಲ, ಅಭಿವೃದ್ಧಿ ಶುಲ್ಕವೂ ಸೇರುತ್ತಿಲ್ಲ. ಹೀಗಾಗಿ ಬಿ ಖಾತಾ ರದ್ದು ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯುತ್ತಿದೆ ಎಂದರು.
ಬಿ ಖಾತಾ ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಕೊಡಲಾಗಿದೆ. ಕನ್ವರ್ಷನ್ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಹೆಚ್ಚು ಹೆಚ್ಚು ಎ ಖಾತಾ ಕ್ಕೆ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಬಿಟ್ಟು ಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದ್ದು, ತಪ್ಪು ವಲಯ ವರ್ಗೀಕರಣ ಮಾಡಿರುವ 4 ಲಕ್ಷ 10 ಸಾವಿರ ಆಸ್ತಿ ಮಾಲೀಕರು ಇದ್ದಾರೆ. ಈ ಪೈಕಿ 78 ಸಾವಿರ ನೋಟಿಸ್ಗಳನ್ನು ಈಗಾಗಲೇ ನೀಡಲಾಗಿದೆ. ಆಸ್ತಿ ತೆರಿಗೆ ಟೋಟಲ್ ಸ್ಟೇಷನ್ ಸರ್ವೇಯ ವರದಿಯ ಪ್ರಕರಣಗಳು ಮತ್ತೆ ಆಯುಕ್ತರ ಮಟ್ಟದಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.
ಆಸ್ತಿ ತೆರಿಗೆಯಿಂದ 2800 ಕೋಟಿ ರೂ, ಹಾಗೂ ಕರಗಳೊಂದಿಗೆ ಒಟ್ಟಾರೆ 3500 ಕೋಟಿ ಸಂಗ್ರಹದ ಗುರಿ ಇಡಲಾಗಿದೆ. ಓಎಫ್ಸಿ ಕೇಬಲ್ ಅಳವಡಿಕೆಗಳಿಂದ 105 ಕೋಟಿ ರೂ. ಸಂಗ್ರಹ ಗುರಿ ಹಾಕಲಾಗಿದೆ. ಜಾಹೀರಾತು ಅಳವಡಿಕೆಗೆ ಸದ್ಯಕ್ಕೆ ಅವಕಾಶ ಇಲ್ಲ ಎಂದು ಆಯುಕ್ತರು ತಿಳಿಸಿದರು.