ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳ ವಿಶೇಷ ಮರು ಸಮೀಕ್ಷೆ ಸಂಬಂಧ ಆಯುಕ್ತರ ಅಧ್ಯಕ್ಷತೆಯಲ್ಲಿ ಗುರುವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ “ಪಾಲಿಕೆ ಮಟ್ಟದ ಸಮಿತಿ ಸಭೆ” ನಡೆಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಬೇಕು. ಈ ಸಂಬಂಧ ಇನ್ನೂ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಪಾಲಿಕೆಗೆ ಹೊಸದಾಗಿ 110 ಹಳ್ಳಿಗಳು ಸೇರ್ಪಡೆಯಾಗಿರುವ ಹೊರವಲಯಗಳಲ್ಲಿ ಸಮೀಕ್ಷೆ ನಡೆಸಿ ಸಮಗ್ರ ವರದಿಯನ್ನು ಸಿದ್ದಪಡಿಸುವಂತೆ ಆಯುಕ್ತರು ವಲಯ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದರು.
ಒಳಚರಂಡಿ/ಮಲವಿಸರ್ಜನೆ(ಪಿಟ್‌ಗಳಲ್ಲಿ) ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳು ಇಳಿಯಬಾರದು ಎಂದು ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಆದರೂ ಇನ್ನೂ ಕೆಲವೆಡೆ ಈ ಪದ್ದತಿ ಮುಂದುವರಿಯುತ್ತಿದೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸರಿಯಾಗಿ ಸಮೀಕ್ಷೆ ನಡೆಸಿ ಎಲ್ಲಾದರೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳು ಇನ್ನೂ ಕೆಲಸ ಮಾಡುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸಿ ಅವರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಹಾಯಕ ಆಯುಕ್ತರು ಸೋಮಪ್ಪ ಕಡಕೋಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ 08.05.2013ರಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಮೊದಲ ಸಮೀಕ್ಷೆ ನಡೆಸಿ ಪಾಲಿಕೆ ವ್ಯಾಪ್ತಿಯಲ್ಲಿ 201 ಮಂದಿಯನ್ನು ಗುರುತಿಸಲಾಗಿತ್ತು. ಸಮೀಕ್ಷೆಯಲ್ಲಿ ಗುರುತಿಸಿದವರಿಗೆ ಕೇಂದ್ರ ಸರ್ಕಾರವು 40,000 ರೂ. ಸಹಾಯಧನ ನೀಡಲಿದೆ. ಈ ಪೈಕಿ 71 ಮಂದಿಗೆ 40,000 ಸಹಾಯಧನ ನೀಡಲಾಗಿದೆ. ಇನ್ನುಳಿದವರಿಗೆ ಸಹಾಯಧನ ನೀಡಲು ಅಗತ್ಯ ದಾಖಲೆಗಳನ್ನು ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದೀಗ ಹೊಸದಾಗಿ ಪಾಲಿಕೆ 8 ವಲಯಗಳ ಪೈಕಿ ಯಲಹಂಕ, ಬೊಮ್ಮನಹಳ್ಳಿ ಹಾಗೂ ದಾಸರಹಳ್ಳಿ ವಲಯ ಹೊರತುಪಡಿಸಿ ನಡೆಸಿದ ಸಮೀಕ್ಷೆಯಲ್ಲಿ 1,139 ಮಂದಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಈ ವೇಳೆ ಆಯುಕ್ತರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಾಗಿ ಕೆಲಸ ಮಾಡುತ್ತಿದ್ದವರನ್ನು ಗುರುತಿಸಿ ಕೂಡಲೆ ಪಟ್ಟಿ ಸಿದ್ದಪಡಿಸಬೇಕು. ಇದಲ್ಲದೇ ಹೊರ ವಲಯಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳು ಇನ್ನೂ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಸಮೀಕ್ಷೆ ನಡೆಸಿ ಪತ್ತೆ ಹಚ್ಚುವಂತೆ ಕಲ್ಯಾಣ ವಿಭಾಗದ ಅಧಿಕಾರಿಗೆ ಸೂಚನೆ ನೀಡಿದರು.
ಈ ವೇಳೆ, ವಿಶೇಷ ಆಯುಕ್ತರು (ಕಲ್ಯಾಣ) ರವೀಂದ್ರ, ಸಹಾಯಕ/ಉಪ ಆಯುಕ್ತರು(ಕಲ್ಯಾಣ) ಸೋಮಪ್ಪ ಕಡಕೋಳ, ವಲಯ ಜಂಟಿ ಆಯುಕ್ತರುಗಳಾದ ವೆಂಕಟಾಚಲಪತಿ. ನಾಗರಾಜ್, ನರಸಿಂಹಮೂರ್ತಿ, ಪಲ್ಲವಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.