ಬೆಂಗಳೂರು: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಿಗೆ ಪ್ರಯಾಣಿಸಲು ಮುಂದಾಗಿದ್ದ ರೈಲ್ವೆ ಪ್ರಯಾಣಿಕರು ಇನ್ನೂ ಸಂಕಷ್ಟದಲ್ಲಿದ್ದಾರೆ. ಈಶಾನ್ಯ ಭಾರತಕ್ಕೆ ತೆರಳಲು ಸಾವಿರಾರು ಪ್ರಯಾಣಿಕರು ನಿನ್ನೆ ಹಾಗೂ ಇಂದು ರೈಲು ಬುಕ್ ಮಾಡಿದ್ದರು. ತ್ರಿವಳಿ ರೈಲು ಅಪಘಾತ ನಡೆದ ಕಾರಣ ಸಾವಿರಾರು ಪ್ರಯಾಣಿಕರು ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ರೈಲು ನಿಲ್ದಾಣ (ಎಸ್ಎಂವಿಟಿ) ದಲ್ಲಿ ವಾಸ್ತವ್ಯ ಹೂಡಿದ್ದಾರೆ.
ನಿಗದಿತ ಮಾರ್ಗದ ರೈಲು ಪ್ರಯಾಣ ರದ್ದುಗೊಳಿಸಿದ್ದು ವಿಧಿಯಿಲ್ಲದೆ ಹಗಲು-ರಾತ್ರಿ ರೈಲು ನಿಲ್ದಾಣದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಇವರಿಗೆ ಬಿಬಿಎಂಪಿಯು ಊಟ-ತಿಂಡಿ ವ್ಯವಸ್ಥೆ ಕಲ್ಪಿಸಿದೆ. ಉಳಿದುಕೊಂಡಿರುವ 1,500ಕ್ಕೂ ಹೆಚ್ಚು ಪ್ರಯಾಣಿಕರಿಗೂ ಸ್ಥಳದಲ್ಲೇ ಊಟ, ತಿಂಡಿ, ಬಿಸ್ಕತ್, ಬ್ರೆಡ್, ಕುಡಿಯುವ ನೀರು ಹಾಗೂ ಜ್ಯೂಸ್ ವಿತರಿಸಲಾಗುತ್ತಿದೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ನಿಯಮ ಸರಳೀಕರಿಸಿದ LIC
ಬಿಬಿಎಂಪಿ ಪೂರ್ವ ವಲಯದ ಆಯುಕ್ತ ರವೀಂದ್ರ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಿಎಂ, ಡಿಸಿಎಂ ಸೂಚನೆ ಮೆರೆಗೆ ಊಟದ ವ್ಯವಸ್ಥೆ ಮಾಡಲಾಗಿದೆ. 1,500 ಪ್ರಯಾಣಿಕರಿದ್ದರು. ಅವರಿಗೆ ಮಧ್ಯಾಹ್ನ ಊಟದ ಏರ್ಪಾಡಾಗಿದೆ. ರಾತ್ರಿ ಕೂಡ 1,500 ಪ್ರಯಾಣಿಕರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಕೂಡ ಇದ್ದಾರೆ. ಕೆಎಂಎಫ್ ನಿಂದ ಹಾಲಿನ ವ್ಯವಸ್ಥೆಯಾಗಿದೆ. ಹೊರಭಾಗದಲ್ಲಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯಾಗಿದೆ. ಜಲಮಂಡಳಿಯಿಂದ ವಾಟರ್ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆರೋಗ್ಯ ಸೇವೆ ನೀಡಲು ಹೆಲ್ತ್ ಕ್ಯಾಂಪ್ ತೆರೆಯಲಾಗಿದೆ. ಖಾಸಗಿ ಹಾಗೂ ಪಾಲಿಕೆಯಿಂದ ತಲಾ ಎರಡು ಆ್ಯಂಬುಲೆನ್ಸ್ಗಳಿವೆ. ತೀರ ಆರೋಗ್ಯ ಸಮಸ್ಯೆ ಕಂಡು ಬಂದರೆ ಪಾಲಿಕೆಯ ಆಸ್ಪತ್ರೆಗೆ ಕಳಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: 90ಕ್ಕೂ ಹೆಚ್ಚು ರೈಲು ಸಂಚಾರ ರದ್ದು; ಒಡಿಶಾದಿಂದ ಹೊರಹೋಗುವ ವಿಮಾನ ದರ ಏರಿಸದಂತೆ ಸೂಚನೆ
ಸುಳ್ಳು ಸುದ್ದಿ ಹಬ್ಬಿಸಬೇಡಿ: ನಮ್ಮ ಡಿವೈಎಸ್ಪಿ ಓರ್ವರು ಘಟನಾ ಸ್ಥಳದಲ್ಲಿದ್ದಾರೆ. ಕರ್ನಾಟಕದ ಬಗ್ಗೆ ಏನೇ ಮಾಹಿತಿಯಿದ್ದರೂ ಅವರು ನೀಡಲಿದ್ದಾರೆ. ಸುಖಾಸಮ್ಮನೆ ಬೇರೆ ಬೇರೆ ರೀತಿಯಾಗಿ ಸುದ್ದಿ ಹರಡೋದು ಒಳ್ಳೆಯದಲ್ಲ. ಬೆಂಗಳೂರು ಅಥವಾ ಕರ್ನಾಟಕದವರ ಬಗ್ಗೆ ಏನೇ ಮಾಹಿತಿ ಇದ್ದರು ನಾವು ತಿಳಿಸುತ್ತೇವೆ. ಹೀಗಾಗಿ ಆ ರೀತಿಯಾದ ಘಟನೆ ಬಗ್ಗೆ ಮಾಹಿತಿ ಸಿಕ್ಕರೆ ನಾವು ಕುಟುಂಬದವರಿಗೂ ಮಾಹಿತಿ ನೀಡುತ್ತಿವೆ ಎಂದು ರೈಲ್ವೆ ಎಸ್ಪಿ ಸೌಮ್ಯಲತಾ ಸ್ಪಷ್ಟನೆ ನೀಡಿದರು.
ಬಾಲಸೋರ್ ಆಸ್ಪತ್ರೆಗೆ ಸಂತೋಷ್ ಲಾಡ್ ಭೇಟಿ: ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬಾಲಸೋರ್ ಆಸ್ಪತ್ರೆಗೆ ಭೇಟಿ ನೀಡಿ ದಕ್ಷಿಣದ ಭಾಗದ ಕೆಲವು ಪ್ರಯಾಣಿಕರ ಆರೋಗ್ಯ ವಿಚಾರಿಸಿದ್ದಾರೆ. ಕರ್ನಾಟಕದ ಪ್ರಯಾಣಿಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲು ಸಜ್ಜಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ರೈಲು ಅಪಘಾತದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ನೇಮಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳನ್ನು ಕೋಲ್ಕತ್ತಾದಿಂದ ವಿಮಾನದಲ್ಲಿ ಕರೆತಂದ ಸರ್ಕಾರ