ಬೆಂಗಳೂರು: ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ. ಮನವಿಗೆ ಅಸ್ತು ಎಂದಿರುವ ಹೈಕೋರ್ಟ್, ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಅವಧಿ ಮುಗಿದಿರುವ ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಪಾಲಿಕೆಯ ಕಾಂಗ್ರೆಸ್ ಮಾಜಿ ಸದಸ್ಯ ಶಿವರಾಜ್ ಹಾಗೂ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್, ಸರ್ಕಾರ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ಪಾಲಿಕೆಯ ವಾರ್ಡ್ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಸಂವಿಧಾನ ವಿಧಿ 243ರ ನಿಯಮಗಳ ಪ್ರಕಾರ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಸರ್ಕಾರ ಚುನಾವಣೆ ಮುಂದೂಡಲು ಒಂದಲ್ಲ ಒಂದು ನೆಪ ಹೇಳಿಕೊಂಡು ಬರುತ್ತಿದೆ. ಚುನಾವಣೆ ನಡೆಸಲು ಜನರು ಪಿಐಎಲ್ ಹಾಕಬೇಕು ಅಥವಾ ಚುನಾವಣಾ ಆಯೋಗ ನಿರ್ದೇಶನ ಕೇಳಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಇಂತಹ ಪರಿಸ್ಥಿತಿ ನಿರ್ಮಮಿಸಿರುವ ಸರ್ಕಾರದ ಕ್ರಮ ಖಂಡನೀಯ.
ವಿಶೇಷ ಕಾರಣಗಳ ಹೊರತು ಚುನಾಯಿತ ಸದಸ್ಯರ ಅವಧಿ ಮುಗಿಯುವ ಮುನ್ನ ಆಡಳಿತಾಧಿಕಾರಿ ನೇಮಿಸುವುದಕ್ಕೆ ಅವಕಾಶವಿಲ್ಲ. ಹಾಗಿದ್ದೂ ಸರ್ಕಾರ ಪಾಲಿಕೆಗೆ ಅವಧಿಗೆ ಮುನ್ನ ಆಡಳಿತಾಧಿಕಾರಿ ನೇಮಿಸಿದೆ. ಇನ್ನು ಆಡಳಿತಾಧಿಕಾರಿಯನ್ನು 6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ನೇಮಿಸಲು ಅವಕಾಶವಿಲ್ಲ. ಹೀಗಾಗಿ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿದರು.
ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಿಸಿ, ಬಿಬಿಎಂಪಿಗೆ ಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮತದಾರರ ಪಟ್ಟಿ ಪ್ರಕಟಿಸುವುದಷ್ಟೇ ಬಾಕಿಯಿದೆ. ಮತದಾರರ ಪಟ್ಟಿ ತಯಾರಿಕೆಗೆ 3 ಕೋಟಿ ವೆಚ್ಚವಾಗಿದೆ. ವಾರ್ಡ್ ಸಂಖ್ಯೆ ಹೆಚ್ಚಿಸಿದರೆ ಚುನಾವಣೆ ಮತ್ತೊಂದು ವರ್ಷ ವಿಳಂಬವಾಗಲಿದೆ. ಕ್ಷೇತ್ರ ಪುನರ್ ವಿಂಗಡಣೆಗೆ ನಾಲ್ಕು ತಿಂಗಳು ಹಿಡಿಯಲಿದೆ ಎಂದರು. ಅಲ್ಲದೆ 2015ರ ಚುನಾವಣೆಯನ್ನು 2001ರ ಜನಗಣತಿ ಆಧಾರದಲ್ಲೇ ನಡೆಸಲಾಗಿತ್ತು. ಆದರೆ ಸರ್ಕಾರ ಇದೀಗ 2011ರ ಜನಗಣತಿ ಆಧಾರದಲ್ಲಿ ವಾರ್ಡ್ ವಿಂಗಡಣೆ ಮಾಡಲು ಮುಂದಾಗಿದೆ. ಅಷ್ಟಕ್ಕೂ ಸರ್ಕಾರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿಲ್ಲ. ಬದಲಿಗೆ 198 ವಾರ್ಡ್ಗಳನ್ನೇ 243 ವಾರ್ಡ್ಗಳಾಗಿ ಮರು ವಿಂಗಡಿಸಲು ಮುಂದಾಗಿದೆ ಎಂದರು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಾದ ಮಂಡಿಸಲು ಸಮಯಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.