ಬೆಂಗಳೂರು: ನಿತ್ಯೋತ್ಸವ ಕವಿ ಖ್ಯಾತಿಯ ಪ್ರೊ. ನಿಸಾರ್ ಅಹ್ಮದ್ ಹಾಗೂ ಅವರ ಪುತ್ರ ನವೀದ್ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ವೈದ್ಯಕೀಯ ವೆಚ್ಚಕ್ಕಾಗಿ ಪಾಲಿಕೆ 20 ಲಕ್ಷ ರೂಪಾಯಿ ಧನಸಹಾಯ ಮಾಡಿದೆ.
ಇಂದು ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಮೇಯರ್ ವೈದ್ಯಕೀಯ ಅನುದಾನದಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ, ಕನ್ನಡನಾಡಿಗೆ ಅಪಾರ ಕೊಡುಗೆ ನೀಡಿರುವ ಕವಿಗೆ 20 ಲಕ್ಷ ರೂ. ಅನುದಾನ ನೀಡಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಇಂದಿನ ಕೌನ್ಸಿಲ್ ಸಭೆಗೂ ಮುನ್ನ ಕೃಷ್ಣೈಕ್ಯರಾದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶೋಕಾಚರಣೆಯ ಬಳಿಕ ಇಂದಿನ ಕೌನ್ಸಿಲ್ ಸಭೆಯನ್ನ ಮೇಯರ್ ಗೌತಮ್ ಕುಮಾರ್ ಮುಂದೂಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷದಿಂದ 16 ಜನ ಸದಸ್ಯರ ಅನರ್ಹತೆ ವಿಚಾರ ಪ್ರತಿಧ್ವನಿಸಿತು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅನರ್ಹ ಮಾಡಿದ್ದಾರೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಮಗೆ ಯಾವುದೇ ನೋಟಿಸ್ ನೀಡಿಲ್ಲವೆಂದು ವೇಲು ನಾಯ್ಕರ್, ಜಿ.ಕೆ. ವೆಂಕಟೇಶ್ ಸೇರಿ ಹಲವರು ಗದ್ದಲ ಆರಂಭಿಸಿದರು.
ಈ ಕುರಿತು ಮಾತನಾಡಿದ ಮೇಯರ್, ಅನರ್ಹತೆ ಬಗ್ಗೆ ಆಯುಕ್ತರು, ಪ್ರಾದೇಶಿಕ ಆಯುಕ್ತರು ಕ್ರಮ ತೆಗೆದುಕೊಳ್ಳುತ್ತಾರೆ. ಇವತ್ತು ಶ್ರೀಗಳ ಬಗ್ಗೆ ಚರ್ಚೆ ಮಾಡಿ, ಬೇರೆ ಯಾವ ಚರ್ಚೆಗೂ ಅವಕಾಶ ಕೊಡದೆ ಸಭೆಯನ್ನು ಮುಂದೂಡಲಾಗಿದೆ ಎಂದರು.