ಬೆಂಗಳೂರು: ಉದ್ಯಾನ ನಗರಿಯಲ್ಲಿ ಮಳೆಗಾಲದ ವೇಳೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳ(ಎಸ್.ಡಿ.ಆರ್.ಎಫ್) ಸಮನ್ವಯ ಮಾಡಿಕೊಂಡು ಜನ-ಸಾಮಾನ್ಯರಿಗೆ ಅನುಕೂಲಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಮಳೆಗಾಲದಲ್ಲಾಗುವ ಅನಾಹುತಗಳನ್ನು ತಪ್ಪಿಸುವ ಸಂಬಂಧ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ತ್ವರಿತಗತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಲ್ಲಾ ಸಿಬ್ಬಂದಿಯ ಹೆಸರು, ಮೊಬೈಲ್ ಸಂಖ್ಯೆ ನೀಡಬೇಕು.. ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಯ ಸಿಬ್ಬಂದಿಯ ಹೆಸರು, ಮೊಬೈಲ್ ಸಂಖ್ಯೆಯ ಮಾಹಿತಿ ಕೊಡಬೇಕು. ಇದರಿಂದ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ ಮಳೆಗಾಲದ ವೇಳೆ ಎಲ್ಲಾ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮಳೆಗಾಲದಲ್ಲಿ ಜಲಾವೃತವಾಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ಮರಗಳು/ಮರದ ರೆಂಬೆ-ಕೊಂಬೆಗಳು ಧರೆಗುರುಳಿರುವ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ನಾಗರಿಕರು ದೂರುಗಳು ನೀಡಿದ ಕೂಡಲೇ ತ್ವರಿತವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಪಾಲಿಕೆಯ ಅರಣ್ಯ ವಿಭಾಗದಿಂದ ಮರಗಳನ್ನು ತೆರವುಗೊಳಿಸಲು 21 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಹಗಲಿನಲ್ಲಿ 18 ತಂಡಗಳು, ರಾತ್ರಿ ವೇಳೆ 3 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ರಾತ್ರಿ ವೇಳೆಯೂ ಹೆಚ್ಚಿನ ತಂಡಗಳು ಕಾರ್ಯ ನಿರ್ವಹಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದರು.
ಪ್ರತಿ ವಲಯಕ್ಕೂ ಮೇಲ್ವಿಚಾರಕರನ್ನು ನಿಯೋಜಿಸಿ.. ಮಳೆಗಾಲದ ವೇಳೆ ರಾಜ್ಯ ವಿಪತ್ತು ನಿರ್ವಹಣಾ ದಳದಿಂದ ಪಾಲಿಕೆಯ ಎಲ್ಲಾ 8 ವಲಯಗಳಿಗೂ ಒಬ್ಬೊಬ್ಬ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಆಯಾ ವಲಯ ಜಂಟಿ ಆಯುಕ್ತರ ಜೊತೆ ಸಮನ್ವಯ ಮಾಡಿಕೊಂಡು ಕಾರ್ಯನಿರ್ವಹಿಸಬೇಕೆಂದು ಎಸ್.ಡಿ.ಆರ್.ಎಫ್ ಉಪ ನಿರ್ದೇಶಕರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು. ವಿಪತ್ತು ನಿರ್ವಹಣೆ ಸಂಬಂಧ ಆಯಾ ವಲಯ ಮಟ್ಟದಲ್ಲಿ ಸ್ವಯಂಸೇವಕ ತಂಡಗಳನ್ನು ಗುರುತಿಸಬೇಕು ಮತ್ತು ಸಕ್ರಿಯಗೊಳಿಸಬೇಕೆಂದು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಬಳಿಕ ಮಾತಾನಾಡಿದ ಎಸ್.ಡಿ.ಆರ್.ಎಫ್ ನ ಉಪ ನಿರ್ದೇಶಕ ಸಿ.ಗುರುಲಿಂಗಯ್ಯ, ನಗರದಲ್ಲಿ ವಿಪತ್ತು ನಿರ್ವಹಣೆಗಾಗಿ 4 ಬೋಟ್ ಗಳು, 4 ಪೋರ್ಟಬಲ್ ಪಂಪ್ ಗಳು, 44 ಲೈಫ್ ಜಾಕೆಟ್ ಗಳು, ಸೂಚನಾ ಫಲಕಗಳು, ಪ್ಲಡ್ ಲೈಟ್ಸ್, ಟಾರ್ಚ್, 13 ಹಗ್ಗಗಳು ಸೇರಿದಂತೆ ಇನ್ನಿತರೆ ಅಗತ್ಯ ಸಲಕರಣೆಗಳು ಇರಲಿವೆ. ಇದಲ್ಲದೆ ನಗರದಲ್ಲಿ 20 ಕಡೆ ಅಗ್ನಿ ಶಾಮಕದಳಗಳಿದ್ದು, 33 ಕಟಾವು ಯಂತ್ರ, 33 ಪಂಪ್, 5 ಹೆಚ್ಪಿ ಪಂಪ್ ಸೇರಿದಂತೆ ಇನ್ನಿತರೆ ಅಗತ್ಯ ಸಲಕರಣೆಗಳಿರಲಿವೆ. 1 ಪಾಳಿಯಲ್ಲಿ 10 ರಿಂದ 12 ಮಂದಿಯಂತೆ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ 7 ರಕ್ಷಣಾ ವಾಹನ(ರೆಸ್ಕ್ಯೂ ವ್ಯಾನ್)ಗಳಿದ್ದು, ಹೆಚ್ಚು ಸಮಸ್ಯೆಯಾದ ಸ್ಥಳಕ್ಕೆ ತೆರಳಿ ನಾಗರಿಕರ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.
ಇನ್ನು ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ, ಎಲ್ಲಾ ವಲಯ ಆಯುಕ್ತರುಗಳು, ಎಲ್ಲಾ ವಲಯ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಬಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ.. ಬೆಂಗಳೂರಲ್ಲಿ 9,207 ರಸ್ತೆ ಗುಂಡಿ ಪತ್ತೆ.. ಮುಚ್ಚುವ ಕಾಮಗಾರಿ ಕೈಗೆತ್ತಿಗೊಂಡ ಬಿಬಿಎಂಪಿ