ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಹೆಚ್ಚಳವಾಗ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಹೋಟೆಲ್ಗಳು ಸೇರಿ ನಗರದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದರು.
ಇದಲ್ಲದೇ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಗುಣಲಕ್ಷಣ ಇರುವವರಿಗೆ ಮನೆಯಲ್ಲೇ ಐಸೋಲೇಷನ್ನಲ್ಲಿರಲು ಸೌಲಭ್ಯ ನೀಡಲಾಗುವುದು. ಇಲ್ಲವಾದಲ್ಲಿ, ಬಿಬಿಎಂಪಿ ಆರಂಭಿಸುವ 10 ಸಿಸಿಸಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇಂದು ಸಂಜೆಯೊಳಗೆ ಹತ್ತು ಸಿಸಿಸಿ ಕೇಂದ್ರಗಳು ಸಿದ್ಧವಾಗಲಿವೆ ಎಂದು ತಿಳಿಸಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಸಂಖ್ಯೆ ಹೆಚ್ಚಳ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. 150 ರಿಂದ 500 ಬೆಡ್ಗಳಿಗೆ ಏರಿಕೆ ಮಾಡಲಾಗಿದೆ. ಇದೇ ರೀತಿ ಬೌರಿಂಗ್ನಲ್ಲೂ ಹೆಚ್ಚಳ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಂದ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ 4,300 ಬೆಡ್ಗಳ ವ್ಯವಸ್ಥೆ ಆಗಿದೆ. ಬಿಬಿಎಂಪಿಯ ಪ್ರತಿ ವಲಯಗಳಲ್ಲಿ ವಾರ್ರೂಮ್ಗಳ ನಿರ್ಮಾಣ ಮಾಡಿ, ಅವುಗಳ ಮುಖಾಂತರ ಬೆಡ್ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಲು ಬಯಸಿದ್ದ ಹೆಚ್ಡಿಕೆಗೆ ಸಿಗಲಿಲ್ಲ ಬೆಡ್.!
ಸದ್ಯದ ಪರಿಸ್ಥಿತಿಯಲ್ಲಿ 600 ಬೆಡ್ಗಳಿದ್ದು, ದಿನೇ ದಿನೆ ನಾವು ಬೆಡ್ ಸಂಖ್ಯೆ ಸಹ ಹೆಚ್ಚಿಸುತ್ತಿದ್ದೇವೆ. ನೇರವಾಗಿ ಆಸ್ಪತ್ರೆಗೆ ಹೋಗಿ ಬೆಡ್ ಕೇಳಿದ್ರೆ ಬೆಡ್ ಕೊಡಲು ಸಾಧ್ಯವಿಲ್ಲ. ಹೀಗಾಗಿ ಸಹಾಯವಾಣಿ 1912 ಮೂಲಕ ಕರೆ ಮಾಡಿದ ಬಳಿಕ ಪೋರ್ಟಲ್ ಮುಖಾಂತರ ಮಾತ್ರ ಬೆಡ್ ಒದಗಿಸಲು ಸಾಧ್ಯವಿದೆ. ನಿನ್ನೆಯಷ್ಟೇ ಬಿಬಿಎಂಪಿಗೆ 60 ಆಂಬ್ಯುಲೆನ್ಸ್ಗಳು ಸಹ ಬಂದಿವೆ. ಹೀಗಾಗಿ ಖಾಸಗಿ ಆಂಬ್ಯುಲೆನ್ಸ್ಗೆ ಹೋಗುವ ಬದಲು, ಸರ್ಕಾರದ ಉಚಿತವಾದ ಆಂಬ್ಯುಲೆನ್ಸ್ ಮೂಲಕ ಹೋದರೆ ಅನುಕೂಲ ಆಗಲಿದೆ ಎಂದರು.
ಶಿವಾಜಿನಗರದ ಚರಕ ಆಸ್ಪೆತ್ರೆಯಲ್ಲಿ 150 ಐಸಿಯು ಬೆಡ್ ಲಭ್ಯ: ಶಿವಾಜಿನಗರದ ಚರಕ ಆಸ್ಪತ್ರೆಯನ್ನು ಸದ್ಯದಲ್ಲೇ ಆರಂಭಿಸಲಾಗುತ್ತಿದ್ದು, ಇದರಲ್ಲಿ 150 ಐಸಿಯು ವೆಂಟಲೇಟರ್ ಬೆಡ್ ಗಳನ್ನು ನಮ್ಮ ವ್ಯವಸ್ಥೆ ಒಳಗೆ ತರಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಶೇ.50 ರಷ್ಟು ಬೆಡ್ ಮೀಸಲಾತಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 10,231 ಕೋವಿಡ್ ಪ್ರಕರಣಗಳು ಪತ್ತೆ!
ಪಾಸಿಟಿವ್ ಬಂದವರ ಕೈಗೆ ಸೀಲ್ ಹಾಕಲು ತೀರ್ಮಾನ : ಕೊರೊನಾ ಸೋಂಕು ದೃಢಪಟ್ಟವರ ಕೈಗೆ ಮೊದಲಿನಂತೆ ಸೀಲ್ ಹಾಕಲು ತೀರ್ಮಾನಿಸಲಾಗಿದೆ. ಈ ಮೂಲಕ ಸೋಂಕಿತರಿಂದ ಹರಡುವಿಕೆಯನ್ನು ತಡೆಯುವುದು ನಮ್ಮ ಉದ್ದೇಶ ಎಂದು ಮುಖ್ಯ ಆಯುಕ್ತರು ಟ್ವೀಟ್ ಮಾಡಿದ್ದಾರೆ.
ಪ್ಲಾಸ್ಮಾ ಥೆರಪಿ ಎಲ್ಲರಿಗೂ ಅಗತ್ಯ ಇಲ್ಲ: ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ವ್ಯವಸ್ಥೆ ಮಾಡಲು ಹೇಳುತ್ತಿದ್ದಾರೆ. ಆದರೆ ಪ್ಲಾಸ್ಮಾ ಲಭ್ಯತೆ ವಿರಳವಾಗಿದ್ದು, ಇದು ಸೋಂಕಿತರ ಕುಟುಂಬಕ್ಕೆ ಒತ್ತಡವಾಗ್ತಿದೆ. ಈ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತರು ಪ್ಲಾಸ್ಮಾ ಥೆರಪಿ ಎಲ್ಲರಿಗೂ ಅಗತ್ಯವಿಲ್ಲ. ಐಸಿಎಂಆರ್ ಗೈಡ್ ಲೈನ್ ಪ್ರಕಾರ ಕೊಡಬೇಕಿದೆ. ಪ್ಲಾಸ್ಮಾ ಸಂಗ್ರಹ ಅಥವಾ ಚಿಕಿತ್ಸೆ ಬಗ್ಗೆ ಇದನ್ನು ಸರ್ಕಾರದ ತಜ್ಞರ ಸಮಿತಿಯ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತಾ ವಿವರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ: ಆರೋಗ್ಯ ಸಚಿವರಿಗೆ ಫನಾ ತುರ್ತು ಪತ್ರ