ಬೆಂಗಳೂರು: ಕಳೆದ ಐದು ವರ್ಷದಿಂದಲೂ ಓದಿನ ಜತೆಗೆ, ಜೀವನ ಸಾಗಿಸಲು ಹೂವು ಮಾರುತ್ತಿದ್ದ ವಿದ್ಯಾರ್ಥಿನಿ ಬನಶಂಕರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ವಿಶೇಷ ಓದಿಗೆ ಅನುಕೂಲವಾಗಲು ವಿಶೇಷ ಗಿಫ್ಟ್ಅನ್ನು ನೀಡಿದ್ದಾರೆ. ತಾವು ನುಡಿದಂತೆ ಇಂದು ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ ಕೊಟ್ಟಿದ್ದಾರೆ.
ಒಡೆದ ಫೋನ್ನಲ್ಲೇ ಆನ್ಲೈನ್ ಕ್ಲಾಸ್ ಕೇಳಿಸಿಕೊಂಡು ಜತೆಯಲ್ಲಿ ಹೂವು ಮಾರಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದನ್ನು ಗಮನಿಸಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಓದಿಗೆ ಸಹಾಯವಾಗಲಿ ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಲ್ಯಾಪ್ಟಾಪ್ ನೀಡಿದ್ದಾರೆ. ಬಳಿಕ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ, ಚೆನ್ನಾಗಿ ಓದಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಹೂವು ಮಾರಿ ವಿದ್ಯಾಭ್ಯಾಸ.. SSLC ವಿದ್ಯಾರ್ಥಿನಿಗೆ ಬಿಬಿಎಂಪಿ ಆಯುಕ್ತರಿಂದ ವಿಶೇಷ ಕೊಡುಗೆಯ ಭರವಸೆ
ವಿದ್ಯಾರ್ಥಿನಿ ಬನಶಂಕರಿ ಮಾತನಾಡಿ, ಇದು ನನ್ನ ಬದುಕಿನಲ್ಲಿ ಆದ ಅಚ್ಚರಿಗಳಲ್ಲಿ ಒಂದು. ಮೂರು ದಿನದ ಹಿಂದೆ ಕ್ಲಾಸ್ ಅಟೆಂಡ್ ಮಾಡಲು ಕಷ್ಟ ಪಡುತ್ತಿದ್ದೆ. ಈಗ ಲ್ಯಾಪ್ಟಾಪ್ ಸಿಕ್ಕಿದೆ. ಉತ್ತಮವಾಗಿ ಓದಿ, ಎಸ್ಎಸ್ಎಲ್ಸಿಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಪಾಸ್ ಆಗುತ್ತೇನೆ ಎಂದರು.