ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಪತ್ರ ಬರೆದಿರುವ ಬಸವರಾಜ್ ಹೊರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ "ಗ್ರೂಪ್ -ಸಿ" ಮತ್ತು "ಡಿ' ದರ್ಜೆಯ ನೌಕರರು ನನಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಆಯುಕ್ತಾಲಯ, ಉಪನಿರ್ದೇಶಕರ ಕಚೇರಿ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ದ್ವಿದಸ -ಸಹಿತ ಬೆರಳಚ್ಚುಗಾರರು, ಶೀಘ್ರಲಿಪಿಗಾರರು, ಗ್ರೂಪ್-ಡಿ ನೌಕರರು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಮತ್ತು ಶಾಲೆಗಳಲ್ಲಿ ಸತತವಾಗಿ ಒಂದೇ ಕಚೇರಿಯಲ್ಲಿ ಒಟ್ಟಾರೆ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಬೋಧಕೇತರ ನೌಕರರನ್ನು ವರ್ಗಾವಣೆ ಮಾಡುವ ಕುರಿತು ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಮಾಹಿತಿಗಳನ್ನು ಕೋರಿದ್ದೀರಿ ಎಂದು ನೆನಪಿಸಿದ್ದಾರೆ.
ಈ ವಿಷಯದ ಕುರಿತು ದಿನಪತ್ರಿಕೆಯಲ್ಲಿಯೂ ಸಹಿತ ವರದಿ ಪ್ರಕಟವಾಗಿರುತ್ತದೆ. ಸರ್ಕಾರಿ ಆದೇಶ 2013 ರ ಜೂ.07 ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ-2013ರ ಮಾರ್ಗಸೂಚಿ ಪ್ರಕಾರ ಪ್ರತಿ ವರ್ಷ ಮೇ ಮತ್ತು ಜೂನ ತಿಂಗಳಲ್ಲಿ ವರ್ಗಾವಣೆ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದೆ.
ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರಲ್ಲಿ ಒಂದೇ ಕಚೇರಿಯಲ್ಲಿ 5 ವರ್ಷ ಸೇವೆ ಸಲ್ಲಿಸಿದ ನೌಕರರನ್ನು ಡಿಸೆಂಬರ್-2022ರ ತಿಂಗಳಲ್ಲಿ ವರ್ಗಾವಣೆ ಮಾಡಲು ಇಲಾಖೆಯ ಹಂತದಲ್ಲಿ ಸಿದ್ಧತೆ ಮಾಡಿಕೊಂಡಿರುವುದರಿಂದ ಮಧ್ಯಂತರ ಅವಧಿಯಲ್ಲಿ ವರ್ಗಾವಣೆ ಮಾಡುತ್ತಿರುವ ವಿಷಯವು ಎಲ್ಲಾ ಬೋಧಕೇತರ ನೌಕರರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುತ್ತದೆ.
ಹಾಗೂ ಮಧ್ಯಂತರ ಅವಧಿಯಲ್ಲಿ ವರ್ಗಾವಣೆ ಮಾಡುವುದರಿಂದ ಗ್ರೂಪ “ಸಿ” ಮತ್ತು “ಡಿ' ದರ್ಜೆಯ ಸಣ್ಣ ನೌಕರರಿಗೆ ತುಂಬಾ ಅನಾನುಕೂಲವಾಗುವುದಲ್ಲದೆ, ಕುಟುಂಬ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ನೌಕರರ ಹಿತದೃಷ್ಟಿಯಿಂದ ಪ್ರಸ್ತುತ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಈ ಮೂಲಕ ಕೋರುತ್ತೇನೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮತದಾರರ ಪರಿಷ್ಕರಣೆ ಅಕ್ರಮ: ಬೂತ್ ಮಟ್ಟದ ಅಧಿಕಾರಿಗಳು ಸೇರಿ ಮತ್ತೆ ಐವರ ಬಂಧನ