ಬೆಂಗಳೂರು: "ದೇಶದಲ್ಲಿ ದ್ವೇಷ ಎನ್ನುವುದು ಪ್ರಜಾಪ್ರಭುತ್ವವನ್ನೇ ನುಂಗಿ ಹಾಕಿದೆ. 1980ರ ದಶಕದಲ್ಲಿ ನಾವು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೆವು. ಆದರೆ 1990ರ ನಂತರ ಸಮಾನತೆಯನ್ನು ಸರಿಸಿ, ಸೌಹಾರ್ದತೆಯ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಿದ್ದೇವೆ. ಇದರ ಅರ್ಥ ಈ ದೇಶದ ಆಡಳಿತಗಾರರು ಆದ್ಯತೆಗಳ ಪಲ್ಲಟ ಮಾಡಿದ್ದಾರೆ. ಸಮಾನತೆಯನ್ನು ಹಿಂದಕ್ಕೆ ಸರಿಸಿ ಸಹಿಷ್ಣುತೆ ಬೇಕು ಎಂದು ಹೇಳುತ್ತಿದ್ದೇವೆ" ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸೌಹಾರ್ದ ಭಾರತ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸದ್ಯಕ್ಕೆ ಈ ರಾಷ್ಟ್ರದಲ್ಲಿ ದ್ವೇಷ ಭಾಷಣಕ್ಕೆ ಮಾತ್ರವಲ್ಲ, ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುವ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತಿವೆ. ಈ ಸಂದರ್ಭದಲ್ಲಿ ನಿಜವಾದ ಗಣರಾಜ್ಯವು ದ್ವೇಷವಾದಿ ಭಾರತವನ್ನು ಹಿಮ್ಮೆಟ್ಟಿಸುವ ಮೂಲಕ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಇದಕ್ಕೆ ಸೌಹಾರ್ದತೆ ಬುನಾದಿ ಆಗಬೇಕು" ಎಂದರು.
"ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮವನ್ನು ಎಂದೂ ನಂಬಿದವರಲ್ಲ. ಒಂದು ಹಂತದಲ್ಲಿ ಬೇಸರಗೊಂಡು ಈ ಧರ್ಮದಿಂದ ಆಚೆಗೆ ಬಂದವರು. ಒಂದು ಧರ್ಮವನ್ನು ನಂಬಿಯೂ ಜಾತ್ಯಾತೀತವಾಗಿ ಬದುಕುವುದು ಹೇಗೆ ಎಂದು ಗಾಂಧಿ ಮತ್ತು ವಿವೇಕನಂದರು ತಿಳಿಸಿಕೊಟ್ಟಿದ್ದಾರೆ. ಇವರಿಬ್ಬರೂ ಹಿಂದೂ ಧರ್ಮಕ್ಕೆ ನಿಷ್ಠರಾಗಿದ್ದರು. ಆದರೆ, ಅವರು ಹಿಂದೂ ಧಾರ್ಮಿಕ ಮೂಲಭೂತವಾದಿಗಳಾಗಿರಲಿಲ್ಲ. ಹಿಂದೂ ಧರ್ಮದ ಒಳವಿರ್ಮಶಕರಂತೆ ಅವರು ಕೆಲಸ ಮಾಡಿದ್ದಾರೆ" ಎಂದು ಹೇಳಿದರು.
"ಮಹಾತ್ಮ ಗಾಂಧಿ ಎಂದಿಗೂ ರಾಮನನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತರಲಿಲ್ಲ. ನೆನಪಿಸಿಯೂ ಕೊಳ್ಳಲಿಲ್ಲ. ಹಾಗಂತ ಅವರು ಶ್ರೀರಾಮನ ಭಕ್ತರಾಗಿದ್ದರು. ಅಧಿಕಾರಕ್ಕಾಗಿ ಈ ಹೆಸರು ಬಳಸಿಕೊಳ್ಳಲಿಲ್ಲ. ಅವರು ಚರಕ, ಖಾದಿ ಮತ್ತು ಉಪ್ಪನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿಕೊಂಡರು. ಜಾತ್ಯತೀತ ಎಂದು ಹೇಳಲು ಕೆಲವರು ಹಿಂಜರಿಯುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪದವನ್ನು ಬಳಸಿರುವುದು ತಪ್ಪು ಎಂದು ಹೇಳುತ್ತಿದ್ದಾರೆ. ಅಂತವರು ಜಾತ್ಯತೀತ ಭಾರತ ಎನ್ನುವ ಬದಲಿಗೆ ದ್ವೇಷಾತೀತ ಭಾರತ ಎಂದಾದರೂ ಹೇಳಲಿ" ಎಂದರು.
ಇದನ್ನೂ ಓದಿ: ಕನ್ನಡ ವಿದ್ಯಾರ್ಥಿಗಳು ಮುಖ್ಯ ಲೇಖಕರ ಪಠ್ಯ ಅಭ್ಯಾಸ ಮಾಡದ ಸ್ಥಿತಿ ಉಂಟಾಗಿದೆ : ಬರಗೂರು ರಾಮಚಂದ್ರಪ್ಪ
"ಧರ್ಮವನ್ನು ಉಲ್ಲೇಖ ಮಾಡುವ ಮುಖಾಂತರವಾಗಿ ಒಂದು ಧರ್ಮದ ಜನ ಇನ್ನೊಂದು ಧರ್ಮದ ಜೊತೆಯಲ್ಲಿ ಕಿತ್ತಾಡುವ ರೀತಿ ದ್ವೇಷ ಸಾಧಿಸುತ್ತಿದ್ದಾರೆ. ಈ ಮೂಲಕ ದೇಶ ತನಗೆ ತಾನೇ ನಾಶವಾಗುವಂತಹ ಸ್ಥಿತಿಗೆ ತಲುಪಿಸಲು ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ಜಾಗೃತವಾಗುವ ಕಾಲಘಟ್ಟದಲ್ಲಿ ನಾವು ಇದ್ದೇವೆ" ಎಂದು ಅವರು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, "ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ನಾವು ಮುಂಬರುವ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು" ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಮಾನವ ಹಕ್ಕುಗಳ ಹೋರಾಟಗಾರ್ತಿ ಶಬ್ನಮ್ ಹಾಶ್ಮಿ, ಇತಿಹಾಸ ತಜ್ಞೆ ಮೃದುಲಾ ಮುಖರ್ಜಿ, ಪತ್ರಕರ್ತೆ ಸಬಾ ನಖ್ವಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹ್ರೋಝ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆರೋಪ: ಬರಗೂರು ವಿರುದ್ಧ ಬಿಜೆಪಿ ದೂರು