ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಸಲುವಾಗಿ ಮಾ.22 ರಿಂದ ಏ.30 ವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ವೈದ್ಯಕೀಯ ತುರ್ತು ಸೇವೆ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಸಂಪೂರ್ಣವಾಗಿ ಜನ ಸಂಚಾರ ಸ್ತಬ್ಧವಾಗಿತ್ತು.
ಏಪ್ರಿಲ್ ತಿಂಗಳಲ್ಲಿ 211 ಜನ ಅಪಘಾತಗಳಿಗೆ ಬಲಿ:
ಏಪ್ರಿಲ್‌ನಲ್ಲಿ ಜನ ಸಂಚಾರಕ್ಕೆ ನಿರ್ಬಂಧವಿದ್ದರೂ ಸಹ 199 ರಸ್ತೆ ಅಪಘಾತಗಳು ಸಂಭವಿಸಿದ್ದು 211 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಸಣ್ಣಪುಟ್ಟ 997 ಅವಘಡಗಳಲ್ಲಿ 885 ಮಂದಿ ಗಾಯಗೊಂಡಿದ್ದಾರೆ. ಈ ಅಂಕಿಅಂಶಗಳ ಆಧಾರದಲ್ಲಿ ಏಪ್ರಿಲ್ ತಿಂಗಳಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ 7 ಮಂದಿ ಜೀವ ಬಿಟ್ಟಿದ್ದಾರೆ.
ಲಾಕ್‌ಡೌನ್‌ಗೂ ಮುನ್ನ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಅಂದಾಜು ದಿನಕ್ಕೆ 23 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ಸಹ ಜನವರಿಯಲ್ಲಿ 3,780, ಫೆಬ್ರವರಿಯಲ್ಲಿ 3,660 ಮತ್ತು ಮಾರ್ಚ್‌ನಲ್ಲಿ 3,028 ಪ್ರಕರಣಗಳು ದಾಖಲಾಗಿವೆ.
ಪೊಲೀಸರ ಕಣ್ತಪ್ಪಿಸಲು ಹೋಗಿ ಪ್ರಾಣ ಬಿಟ್ಟರು:
ಅಗತ್ಯ ಸೇವೆಗಳಿಗಾಗಿ ಓಡಾಟ ಮಾಡುವವರಿಗೆ ಪಾಸ್ ನೀಡಲಾಗಿತ್ತು. ಆದರೆ, ಕೆಲವರು ಪಾಸ್ ಇಲ್ಲದೇ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸಿದಾಗ ಅಪಘಾತ ಹೆಚ್ಚಾಗಿವೆ. ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 191 ಅಪಘಾತಗಳು ಸಂಭವಿಸಿ 48 ಮಂದಿ ಬಲಿಯಾಗಿದ್ದಾರೆ. ಅದೇ ರಾಜ್ಯ ಹೆದ್ದಾರಿಯಲ್ಲಿ 194 ಅವಘಡಗಳ ಸಂಭವಿಸಿ 67 ಪ್ರಾಣ ಹಾನಿಯಾಗಿದೆ. ಇತರೆ ರಸ್ತೆಗಳಲ್ಲಿ 481 ಅಪಘಾತದಲ್ಲಿ 96 ಮಂದಿ ಮೃತಪಟ್ಟಿದ್ದಾರೆ.
ಮಾರ್ಚ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 907 ಅಪಘಾತ ಸಂಭವಿಸಿ 281 ಸಾವನ್ನಪ್ಪಿದ್ದಾರೆ. ರಾಜ್ಯ ಹೆದ್ದಾರಿಗಳಲ್ಲಿ ನಡೆದ 781 ಅಪಘಾತ ಪ್ರಕರಣಗಳಲ್ಲಿ 241 ಹಾಗೂ ಇತರೆ ರಸ್ತೆಗಳಲ್ಲಿ 1,340 ಅಪಘಾತದಲ್ಲಿ 290 ಜನರು ಜೀವ ಕಳೆದುಕೊಂಡಿದ್ದಾರೆ.
ಲಾಕ್‌ಡೌನ್ ವೇಳೆ ರಾಜ್ಯದ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಈ ವೇಳೆ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಪ್ರಾಣತೆತ್ತಿದ್ದಾರೆ.