ಬೆಂಗಳೂರು: ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕೃಷ್ಣ ಅಲಿಯಾಸ್ ಟೋರಿ ಕೃಷ್ಣ ಹಾಗೂ ಕೃಷ್ಣ ಅಲಿಯಾಸ್ ಮಾಯಾ ಕೃಷ್ಣ ಬಂಧಿತ ಆರೋಪಿಗಳು. ಇದೇ ತಿಂಗಳ 10 ರಂದು ಶ್ರೀನಿವಾಸ್ ಎಂಬಾತನನ್ನ ಕೊಲೆ ಮಾಡಿ ಸುಟ್ಟು ಹಾಕಲು ಯತ್ನಿಸಿದ್ದರು. ಈ ಹಿನ್ನೆಲೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಬಳದ ವಿಚಾರಕ್ಕೆ ನಡೀತಾ ಕೊಲೆ?
ಮೃತ ಶ್ರೀನಿವಾಸ್ ಹಾಗೂ ಆರೋಪಿಗಳಿಗೆ ಸಂಬಳ ನೀಡುವ ವಿಚಾರಕ್ಕೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗ್ತಿದೆ. ಇದೇ ತಿಂಗಳ 9 ರಂದು ಶ್ರೀನಿವಾಸ್ ಆರೋಪಿಗಳಿಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಸಂಬಳದ ಹಣ ಕೊಡುವಂತೆ ಕೇಳಿದ್ದ. ಇದರಿಂದ ಕೋಪಗೊಂಡ ಆರೋಪಿಗಳು ಶ್ರೀನಿವಾಸನನ್ನು ಹತ್ಯೆ ಮಾಡಿ, ಬಳಿಕ ಪೆಟ್ರೋಲ್ ಹಾಕಿ ಶವವನ್ನ ಸುಡಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಸದ್ಯ ಆರೋಪಿಗಳಿಂದ ಒಂದು ಆಟೋ, ಒಂದು ಟಿವಿಎಸ್ ಸ್ಟಾರ್ ಸಿಟಿ ಬೈಕ್, ಚಾಕು ಹಾಗೂ ಸೈಜ್ ಕಲ್ಲನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.