ಬೆಂಗಳೂರು: ಮಂಗಳೂರು-ಬೆಂಗಳೂರು ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ನೂರಾರು ಪೆಟ್ರೋಲ್ ಟ್ಯಾಂಕರ್ಗಳು ಸಂಚಾರ ಸ್ಥಗಿತಗೊಳಿಸಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಂಗಳೂರಿಗೆ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.
ಕರಾವಳಿ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹಾನಿಗೊಳಗಾಗಿವೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಎನ್ಎಚ್ 75ರ ಶಿರಾಢಿ ಘಾಟ್ನಲ್ಲಿ ಗುಡ್ಡ ಕುಸಿತವಾದ ಕಾರಣ ನಿನ್ನೆಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಮಳೆಯ ಅಬ್ಬರಕ್ಕೆ ಚಾರ್ಮಾಡಿ, ಮಡಿಕೇರಿ, ಸಕಲೇಶಪುರ ಹೆದ್ದಾರಿ ಬಂದ್ ಆಗಿವೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕವೇ ಇಲ್ಲದಾಗಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಮಂಗಳೂರಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಪೆಟ್ರೋಲ್ ಟ್ಯಾಂಕರ್ಗಳ ಸಂಚಾರ ಸ್ಥಗಿತ:
ಮಂಗಳೂರಿನಿಂದ ಬೆಂಗಳೂರಿಗೆ ಬಹುಪಾಲು ಪೆಟ್ರೋಲ್ ಸರಬರಾಜು ಆಗುತ್ತದೆ. ಅದರಲ್ಲೂ ಪ್ರಮುಖವಾಗಿ ಖಾಸಗಿ ಪೆಟ್ರೋಲ್ ಮಾರಾಟ ಸಂಸ್ಥೆಗಳಾದ ರಿಲಯನ್ಸ್, ಶೆಲ್ ಪ್ರಟೋಲ್ ಬಂಕ್‌ಗಳಿಗೆ ಸಂಪೂರ್ಣವಾಗಿ ಪೆಟ್ರೋಲ್ ಸಾಗಾಟವಾಗುತ್ತಿರುವುದು ಮಂಗಳೂರಿನಿಂದ.
ಮಂಗಳೂರಿನಿಂದ ಬೆಂಗಳೂರಿಗೆ ನಿತ್ಯ ಸುಮಾರು 500ಕ್ಕೂ ಹೆಚ್ಚು ಪೆಟ್ರೋಲ್ ಟ್ಯಾಂಕರ್ಗಳ ಸಂಚಾರ ನಡೆಸುತ್ತದೆ. ಇದೀಗ ರಸ್ತೆ ಸಂಪರ್ಕ ಕಡಿತವಾದ ಹಿನ್ನೆಲೆ ಪೆಟ್ರೋಲ್ ತುಂಬಿಸಿ ಬೆಂಗಳೂರಿಗೆ ಹೊರಟು ನಿಂತಿರುವ ಸುಮಾರು 250 ಪೆಟ್ರೋಲ್ ಟ್ಯಾಂಕರ್ಗಳು ಮಂಗಳೂರಿನಲ್ಲೇ ನಿಂತಿವೆ. ಇನ್ನು ನೂರಕ್ಕೂ ಹೆಚ್ಚು ಟ್ಯಾಂಕರ್ಗಳು ಸಕಲೇಶಪುರ, ಹಾಸನ ರಸ್ತೆ ಮಧ್ಯೆದಲ್ಲೇ ನಿಂತಿವೆ.
ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ?:
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪೆಟ್ರೋಲ್ ಸಾಗಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸುಮಾರು 80ಕ್ಕೂ ಹೆಚ್ಚು ಎಸ್ಸಾರ್ ಪೆಟ್ರೋಲ್ ಬಂಕ್ಗಳಿದ್ದು, ಸುಮಾರು ನೂರಕ್ಕೂ ಹೆಚ್ಚು ಶೆಲ್ ಪೆಟ್ರೋಲ್ ಬಂಕ್ಗಳಿವೆ. ಇದರ ಜತೆಗೆ ಹೊಸೂರು, ಆನೇಕಲ್ನಲ್ಲಿನ ಈ ಖಾಸಗಿ ಪೆಟ್ರೋಲ್ ಬಂಕ್ಗಳಿಗೂ ಮಂಗಳೂರು ಟರ್ಮಿನಲ್‌ನಿಂದಲೇ ಪೆಟ್ರೋಲ್ ಸರಬರಾಜು ಆಗುತ್ತಿದೆ.
ಇನ್ನೆರಡು ದಿನ ಮಂಗಳೂರು ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡರೆ ಬೆಂಗಳೂರಿಗೆ ಪೆಟ್ರೋಲ್ ಸಾಗಾಟದಲ್ಲಿ ವ್ಯತ್ಯಯವಾಗಲಿದೆ. ಇದರಿಂದ ಬೆಂಗಳೂರಿನ ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಕೊರತೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಪೆಟ್ರೋಲ್ ಟ್ಯಾಂಕರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮ್ ಆತಂಕ ವ್ಯಕ್ತಪಡಿಸಿದ್ದಾರೆ.