ಬೆಂಗಳೂರು: ಸದ್ಯ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಆರಂಭಿಸಬಹುದು. ತಾಲೂಕಿಗೆ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪಣತೊಟ್ಟಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ಭಾರೀ ಹಿನ್ನಡೆಯಾಗಿದೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೆಡಿಕಲ್ ಕಾಲೇಜು ವಿಚಾರದಲ್ಲಿ ಏನೂ ಗೊಂದಲ ಇಲ್ಲ. ಈಗ ಮೆಡಿಕಲ್ ಕಾಲೇಜು ಜಿಲ್ಲೆಗೆ ತಾನೇ ಕೊಡೋಕೆ ಆಗೋದು?. ತಾಲೂಕಿಗೆ ಕೊಡೋಕೆ ಆಗುತ್ತಾ?. ನಾನು ಈ ಬಗ್ಗೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದರು.
ಟಿಪ್ಪು ಪಠ್ಯದ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಂದು ಬೆಳಗ್ಗೆ ಸುರೇಶ್ ಕುಮಾರ್ ಬಂದಿದ್ದರು. ಟಿಪ್ಪು ಸುಲ್ತಾನ್ ಪಠ್ಯದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ಮಾಡಿದ್ದಾರೆ. ಆ ಸಮಿತಿ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಗೊಂದಲ ಏನೂ ಇಲ್ಲ ಎಂದು ಸಿಎಂ ಹೇಳಿದರು.
ಈಗಾಗಲೇ ಅತಿವೃಷ್ಠಿಗೆ ತೆಗೆದುಕೊಂಡ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ಸತ್ತು ಹೋಗಿದೆ ಎಂದು ಟೀಕೆ ಮಾಡಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಮಾಡದ ಒಳ್ಳೆಯ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಭೇಟಿ ನೀಡಿದಾಗ ನಮ್ಮ ರಾಜ್ಯದ ಸ್ಥಿತಿ ಗತಿಗಳನ್ನು ಹೇಳಿದ್ದೇನೆ. ಬ್ಯಾಂಕಿನಿಂದ ಏನೇನು ಮಾಡಬೇಕೋ, ಹೌಸಿಂಗ್ನಿಂದ ಏನೇನೋ ಮಾಡಬೇಕೋ, ಅದರ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಹೀಗಾಗಿ ನಿರ್ಮಲ ಸೀತಾರಾಮನ್ ಕೇಂದ್ರಿಂದ ಇನ್ನು ಹೆಚ್ಚು ಸಹಕಾರ ಕೊಟ್ಟರೆ ಅತಿವೃಷ್ಟಿಯಿಂದ ತುತ್ತಾದವರಿಗೆ ಹೆಚ್ಚಿನ ನೆರವು ಕೊಡುತ್ತೇವೆ ಎಂದರು.