ಬೆಂಗಳೂರು : ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದ 52 ಗ್ರಾಂ ಚಿನ್ನಾಭರಣವನ್ನು ವಾರಸುದಾರನ ಕುಟುಂಬಕ್ಕೆ ಬಂಡೆಪಾಳ್ಯ ಪೊಲೀಸರು ಹಿಂತಿರುಗಿಸಿದ್ದಾರೆ.
ಮಂಗಮ್ಮಪಾಳ್ಯ ನಿವಾಸಿಯಾಗಿರುವ ಲಲಿತಾ ದಂಪತಿಗೆ ಇನ್ಸ್ಪೆಕ್ಟರ್ ಯೋಗೇಶ್ ನೇತೃತ್ವದ ತಂಡ ನ್ಯಾಯಾಲಯದಿಂದ ಅನುಮತಿ ಪಡೆದು 52 ಗ್ರಾಂ ಚಿನ್ನಾಭರಣ ಹಸ್ತಾಂತರಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಾಡಹಗಲೇ ಬೀಗ ಹಾಕಿದ್ದ ಮನೆಗೆ ನುಗ್ಗಿದ ಚೋರರು, ಮನೆಯಲ್ಲಿದ್ದ 52 ಗ್ರಾಂ ಚಿನ್ನಾಭರಣ ಹಾಗೂ ₹20 ಸಾವಿರ ನಗದು ದೋಚಿದ್ದರು.
ಈ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇದೇ ವರ್ಷ ಫೆಬ್ರುವರಿಯಲ್ಲಿ ಕೆಜಿಹಳ್ಳಿಯ ನಿವಾಸಿ ನಯಾಜ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿ ಆರೋಪಿಗಳಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಪೂರ್ಣವಾಗದ ಕಾರಣ ವಾರಸುದಾರರಿಗೆ ಆಭರಣ ಹಿಂತಿರುಗಿಸಲು ಆಗಿರಲಿಲ್ಲ.
ಇನ್ನೊಂದೆಡೆ ಜೀವನಕ್ಕಾಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಲಲಿತಾ ಪತಿ ಕುಮಾರ್ಗೆ ಸ್ಟ್ರೋಕ್ ಆಗಿತ್ತು. ಹೀಗಾಗಿ, ಲಲಿತಾ ಕೆಲಸಕ್ಕೆ ಹೋಗಿ ಇಬ್ಬರು ಹೆಣ್ಣು ಮಕ್ಕಳ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಹೆಣ್ಣು ಮಕ್ಕಳ ಹೆಸರಿನಲ್ಲಿದ್ದ ಒಡವೆ ಖದೀಮರ ಪಾಲಾಗಿದ್ದರೆ, ಇನ್ನೊಂದೆಡೆ ಕೊರೊನಾ ಲಾಕ್ಡೌನ್ನಿಂದ ದುಡಿಯವ ಕೈಗಳಿಗೆ ಕೆಲಸ ಇಲ್ಲವಾಗಿತ್ತು.
ಇದರಿಂದ ಜೀವನ ನಿರ್ವಹಣೆ ಮಾಡುವುದೇ ಸವಾಲಾಗಿತ್ತು. ಇದನ್ನು ಅರಿತ ಬಂಡೆಪಾಳ್ಯ ಪೊಲೀಸರು ಚಿನ್ನಾಭರಣ ನೀಡಲು ತ್ವರಿತ ಕಾನೂನು ಪ್ರಕ್ರಿಯೆ ಮುಗಿಸಿ ನ್ಯಾಯಾಲಯದಿಂದ ಅನುಮತಿ ಪಡೆದು ಆಭರಣಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಒಂದು ರೀತಿ ಇದು ನೊಂದಿದ್ದ ಕುಟುಂಬಕ್ಕೆ ಪೊಲೀಸರಿಂದ ದೀಪಾವಳಿ ಗಿಫ್ಟ್ ಸಿಕ್ಕಂತಾಗಿದೆ.