ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರ ದಯಾನಂದ ನಗರದ ಕರ್ಣ ಬಂಧಿತ ಆರೋಪಿ. ಫೆ. 29 ರಂದು ಸಿಂಗಾಪುರದ ಹೊಸಬಾಳು ನಗರದ ಕೂಲಿ ಕೆಲಸ ಮಾಡುವ ಬಸವರಾಜು ಹಾಗೂ ಲಕ್ಷ್ಮೀ ದಂಪತಿಯ ಮೂರು ವರ್ಷದ ಅರ್ಜುನ್ ಎಂಬ ಮಗುವನ್ನು ಖದೀಮರು ಅಪಹರಿಸಿ, ಬಳಿಕ ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಮಗುವನ್ನು ಏಕಾಂಗಿಯಾಗಿ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರ ಠಾಣೆಯ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದ ತಂಡ, 48 ಗಂಟೆಗಳಲ್ಲಿ ಮಗುವನ್ನು ರಕ್ಷಿಸಿದ್ದರು. ಸದ್ಯ ಪ್ರಕರಣ ಪ್ರಮುಖ ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮಗು ಅಪಹರಿಸಿದ್ದು ಯಾಕೆ ?
ಪೇಂಟಿಂಗ್ ಕೆಲಸ ಮಾಡುವ 45 ವರ್ಷದ ಆರೋಪಿ ಕರ್ಣಗೆ ಮೂವರು ಮಕ್ಕಳಿದ್ದಾರೆ. ಹೀಗಿದ್ದರೂ ಪರಸ್ತ್ರೀ ಜೊತೆ ಸಂಬಂಧ ಹೊಂದಿದ್ದ. ಪರಿಣಾಮ ಆಕೆ ಗಂಡುವಿಗೆ ಜನ್ಮ ನೀಡಿದ್ದಳು. ಇದೇ ಸಂದರ್ಭದಲ್ಲಿ ಈತನ ಸಂಬಂಧಿ ದಂಪತಿಗೆ ಹಲವು ವರ್ಷಗಳಿಂದ ಮಗು ಆಗಿರಲಿಲ್ಲ. ಈ ವೇಳೆ ತನ್ನ ಮಗುವನ್ನು ಸಂಬಂಧಿಕರಿಗೆ ಮಗು ತೋರಿಸಿದ್ದನು.
ದಂಪತಿಯು ಲಿಖಿತ ರೂಪದಲ್ಲಿ ಮಗು ದತ್ತು ಪ್ರಕ್ರಿಯೆಯನ್ನು ಮುಗಿಸಿಕೊಂಡು ಆರೋಪಿಗೆ ಕೈ ತುಂಬಾ ಹಣ ನೀಡಿದ್ದರು. ಇದಕ್ಕೆ ಖುಷಿಗೊಂಡ ಆರೋಪಿ, ಬೇರೆ ಬೇರೆ ಮಗು ಮಾರಾಟ ಮಾಡಿದರೆ ಕೈ ತುಂಬಾ ಹಣ ಗಳಿಸಬಹುದು ಎಂದು ದುರಾಲೋಚನೆ ಮಾಡಿ ಮಗು ಅಪಹರಣಕ್ಕೆ ಕೈಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.