ಕಲಬುರಗಿ: ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿವೆ. ಆದ್ರೆ ಬಿಜೆಪಿ ಎಲ್ಲಾ ಸಮುದಾಯಗಳನ್ನು ಒಂದಾಗಿ ಕಾಣುವ ಕಾರಣ ಉಪಕದನದಲ್ಲಿ ಕಮಲ ಅರಳಿದೆ. ಅದೆಲ್ಲಿಗೇ ಹೋದರೂ ಕೂಡ ಕಮಲ ಅರಳುತ್ತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಶಿರಾ ಹಾಗೂ ಆರ್‌ಆರ್ ನಗರದ ಉಪ ಚುನಾವಣೆಯಲ್ಲಿ ಕಮಲ ಅರಳಿಸಿದ ರೂವಾರಿ ಸಿಎಂ ಬಿ.ಎಸ್. ಯಡಿಯೂರಪ್ಪರ ಪುತ್ರ ಬಿ.ವೈ. ವಿಜಯೇಂದ್ರರ ಚಿತ್ತ ಇದೀಗ ಬಸವಕಲ್ಯಾಣದತ್ತ ನೆಟ್ಟಿದೆ. ಕಲಬುರಗಿ ಮೂಲಕ ಬಸವಕಲ್ಯಾಣ ಕಡೆ ಹೊರಟ ವಿಜಯೇಂದ್ರ, ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜ್ಯ ಉಪಾಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಬಂದಿದ್ದೇನೆ. ಈ ಹಿಂದೆ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು. 15 ರಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಅಲ್ಲದೇ ಮೊನ್ನೆ ನಡೆದ ಚುನಾವಣೆಯಲ್ಲಿ 2 ಕ್ಷೇತಗಳಲ್ಲಿಯೂ ಗೆಲುವು ಸಾಧಿಸಿದ್ದೇವೆ. ಶಿರಾ ಕ್ಷೇತ್ರ ದೊಡ್ಡ ಸವಾಲಾಗಿದ್ದರೂ ಕೂಡ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪ ಅವರ ಕೆಲಸಗಳೇ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿವೆ. ಮುಂಬರುವ ದಿನಗಳಲ್ಲಿ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಹಾಗಾಗಿ ಬಸವಕಲ್ಯಾಣದಲ್ಲಿ ಇಂದು ಮುಖಂಡರನ್ನು ಭೇಟಿಯಾಗಿ ಬೆಂಗಳೂರಿಗೆ ವಾಪಸಾಗುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಕ್ಷೇತ್ರದ ಜವಾಬ್ದಾರಿ ಕೊಟ್ಟರೂ ಕೂಡ ಅದನ್ನು ವಹಿಸಿಕೊಳ್ಳುತ್ತೇನೆ ಎಂದರು.
ನಾನು ಆಕಾಂಕ್ಷಿಯಲ್ಲ:
ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ನಾನಂತೂ ಆಕಾಂಕ್ಷಿಯಲ್ಲ. ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಪಕ್ಷದ ಹೈಕಮಾಂಡ್ ನಿರ್ಣಯಿಸೋ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.