ಬೆಂಗಳೂರು: ನೀರು ಪೋಲಾಗುವುದನ್ನು ತಪ್ಪಿಸಲು ಕೃಷಿ ಬೆಳೆಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ನೀರು ಹರಿಸಲು ಸೆನ್ಸಾರ್ ಆಧಾರಿತ ಮಣ್ಣಿನ ತೇವಾಂಶ ಅಳತೆ ಮಾಪನ ಆವಿಷ್ಕರಿಸಿದ್ದು, ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತಿದೆ.
ಸಾಮಾನ್ಯವಾಗಿ ಜಮೀನು ಅಥವಾ ತೋಟಗಳಲ್ಲಿ ಬೆಳೆಗಳಿಗೆ ನೀರು ಹರಿಸಲು ವ್ಯಕ್ತಿಯೊಬ್ಬರ ನೆರವು ಅಗತ್ಯವಿದೆ. ಸಕಾಲದಲ್ಲಿ ಬೆಳೆಗೆ ನೀರು ಹರಿಸದಿದ್ದರೆ ಬೆಳೆ ಕೈಗೆ ಸಿಗುವುದಿಲ್ಲ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ದತಿಯಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಉಳಿಸುತ್ತಿದ್ದರೂ ನೀರು ಪೂರೈಕೆಯಲ್ಲಿ ಅಡೆತಡೆಗಳನ್ನು ರೈತರು ಇಂದಿಗೂ ಅನುಭವಿಸುತ್ತಲೇ ಇದ್ದಾರೆ. ಹೀಗಾಗಿ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸಲು ಹಾಗೂ ಕೃಷಿ ಭೂಮಿಯಲ್ಲಿ ಯಾವ ಪ್ರಮಾಣದಲ್ಲಿ ತೇವಾಂಶವಿದೆ ಎಂಬುದನ್ನು ಪತ್ತೆ ಹಚ್ಚಲು ಮಣ್ಣಿನ ತೇವಾಂಶ ಸೂಚಕ ಮಾಪನ ರೈತರ ನೆರವಿಗೆ ಬರಲಿದೆ.
ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸುವ ಸೆನ್ಸಾರ್ ಆಧಾರಿತ ಸೂಚನ ಮಾಪನವು ಸತತವಾಗಿ ಮಣ್ಣಿನ ತೇವಾಂಶವನ್ನು ಸೆನ್ಸರ್ ಅಳೆಯುವುದರಿಂದ ನೀರು ಪೂರೈಸಲು ರೈತರು ತೋಟದಲ್ಲೇ ಇರಬೇಕಾಗಿಲ್ಲ. ಬೆಳೆ ಹಾಗೂ ಮಣ್ಣಿನ ನಿರ್ದಿಷ್ಟ ಬೇಡಿಕೆಯಷ್ಟೇ ನೀರನ್ನು ಒದಗಿಸಲು ಶಿಫಾರಸ್ಸು ಮಾಡಲಿದ್ದು, ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಗಟ್ಟಬಹುದು. ಇದರಿಂದ ಶೇ.40 ರಿಂದ 50ರಷ್ಟು ನೀರನ್ನು ಉಳಿಸುವುದರ ಜೊತೆಗೆ ಶೇ.80ರಿಂದ 85ರಷ್ಟು ಪೋಷಕಾಂಶ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.
ಹೇಗೆ ಕಾರ್ಯನಿರ್ವಹಿಸಲಿದೆ ಈ ಮಾಪಕ?: ಕೋಲಿನಷ್ಟೇ ಉದ್ದವಿರುವ ಈ ಮಾಪನ ಮಣ್ಣಿನಲ್ಲಿ ಇಟ್ಟಾಗ ಎಷ್ಟು ಪ್ರಮಾಣದಲ್ಲಿ ತೇವಾಂಶವಿದೆ ಎಂಬುದನ್ನು ಬಣ್ಣದ ಮೂಲಕ ಸೂಚಿಸುತ್ತದೆ. ಹಳದಿ ಬಣ್ಣ ಸೂಚಿಸಿದರೆ ಶೇ.75ರಷ್ಟು ತೇವಾಂಶವಿಲ್ಲ, ಹಸಿರು ಸೂಚಿದರೆ ಶೇ.50ರಷ್ಟು ತೇವಾಂಶವಿದೆ, ಕೆಂಪು ತೋರಿಸಿದರೆ ತೇವಾಂಶವಿಲ್ಲ ಹಾಗೂ ನೀಲಿ ಬಣ್ಣ ಬಂದರೆ ಪೂರ್ಣ ಪ್ರಮಾಣದಲ್ಲಿ ನೀರಿನಾಂಶವಿದೆ ಎಂದು ಗುರುತಿಸುತ್ತದೆ. ಕೃಷಿ ಬೆಳೆ, ತೋಟಗಾರಿಕಾ ಹಾಗೂ ಪ್ಲ್ಯಾಂಟೇಷನ್ ಬೆಳೆಗೂ ಇಂತಿಷ್ಟೇ ಪ್ರಮಾಣದಲ್ಲಿ ತೇವಾಂಶವಿದೆಯಾ? ಎಂಬುದನ್ನು ಈ ಮಾಪನ ಖಾತ್ರಿ ಪಡಿಸಲಿದೆ.
ರೈತರಿಗೆ ಆಗುವ ಉಪಯೋಗ?: ನೀರು ಹರಿವಿನ ಪ್ರಮಾಣ ಹಾಗೂ ಸಮಯ ನಿಗದಿಪಡಿಸಬಹುದು ನೀರು ಪೂರೈಸಲು ರೈತರು ತೋಟದಲ್ಲೇ ಇರಬೇಕಿಲ್ಲ. ನೀರು ಸೋರಿಕೆಯಾಗುವುದನ್ನು ನಿಯಂತ್ರಿಸಬಹುದು. ನೀರಿನ ಜೊತೆ ಗೊಬ್ಬರಗಳನ್ನು ರಸಾವರಿ ರೂಪದಲ್ಲಿ ಒದಗಿಸಬಹುದಾಗಿದ್ದು, ಶೇ.40 ರಿಂದ 50ರಷ್ಟು ನೀರನ್ನು ಉಳಿಸುವುದರ ಜೊತೆಗೆ ಶೇ.85ರಷ್ಟು ಪೋಷಕಾಂಶಗಳ ಸಾರ್ಮರ್ಥ್ಯ ಹೆಚ್ಚಿಸಬಹುದಾಗಿದೆ. ಈ ಸೂಚನಾ ಮಾಪಕವು ರೈತರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಬೇಸಾಯ ಶಾಸ್ತ್ರ ವಿಭಾಗದ ಹಿರಿಯ ವಿಜ್ಣಾನಿ ಡಾ.ಡಿ.ಸಿ.ಹನುಮಂತಪ್ಪ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಆಸಕ್ತರು 9880019697ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು ಕೃಷಿ ವಿವಿಯಿಂದ ಕೃಷಿ ಮೇಳದಲ್ಲಿ ಮೊದಲ ಬಾರಿ 'ಬೀಜ ಸಂತೆ'