ಬೆಂಗಳೂರು: ಲಸಿಕೆ ಕಮೀಷನ್ ಆರೋಪ ವಿಚಾರ ಬಯಲಿಗೆ ಬರುತ್ತಿದ್ದಂತೆ ಅನುಗ್ರಹ ವಿಠಲ ಆಸ್ಪತ್ರೆಗೆ ಬಸವನಗುಡಿ ಶಾಸಕ ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಧಿಡೀರ್ ಭೇಟಿ ನೀಡಿ, ಆಡಳಿತ ಮಂಡಳಿಯ ಜೊತೆಗೆ ವಾಗ್ವಾದ ನಡೆಸಿದರು.
ಓದಿ: ಸರ್ಕಾರದ ಲಸಿಕೆ ಮಾರಾಟಕ್ಕಾಗಿ ಕಮಿಷನ್ ಆರೋಪ: ಆಡಿಯೋ ವೈರಲ್..
ನೀವು ನನಗೆ ಎಲ್ಲಿ ದುಡ್ಡು ಕೊಟ್ಟಿದ್ದೀರಾ ಹೇಳಿ ಎಂದು ಶಾಸಕ ಪಟ್ಟು ಹಿಡಿದರು. ಕ್ಯಾಶ್ ನಲ್ಲಿ ಕೊಟ್ಟಿದ್ದೀರಾ ಇಲ್ಲ, ಮನೆಗೆ ದುಡ್ಡು ತಂದು ಕೊಟ್ಟಿದ್ದೀರಾ ಹೇಳಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿ, ಡಾಕ್ಟರ್ಸ್, ಸಿಬ್ಬಂದಿಗೆ ಪ್ರಶ್ನೆ ಮಾಡಿದರು.
ನಂತರ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾದ ಆಡಿಯೋ ಹೊರಬಂದಿದ್ದು, ಮಾಡಿರುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ನನಗೆ ಹಣ ಸಂದಾಯ ಮಾಡಿದ್ದರೆ ಯಾವುದರಲ್ಲಿ ಮಾಡಿದ್ದಾರೆ ಎನ್ನುವುದು ಗೊತ್ತಾಗಬೇಕು ಎಂದರು.
ಹೊಲಸು ರಾಜಕೀಯ ಇಂಥ ಸಮಯದಲ್ಲಿ ಮಾಡಬಾರದು, ರಾಜಕೀಯವಾಗಿ ನನ್ನನ್ನ ಮುಗಿಸೋ ಪ್ರಯತ್ನ ಮಾಡುತ್ತಿದ್ದಾರೆ. ಹವ್ಯಾಸಿ ಕಲಾವಿದರೊಬ್ಬರು ಆಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು. ಆ ಹವ್ಯಾಸಿ ಕಲಾವಿದನಿಗೆ ಇದೇ ಕೆಲಸ, ಆತನಿಗೆ ಬೇರೆ ಯಾವುದೇ ಕೆಲಸ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಅನುಗ್ರಹ ವಿಠಲ ಆಸ್ಪತ್ರೆಯ ಅಧ್ಯಕ್ಷ ರಾಜೇಶ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತ, ವ್ಯಾಕ್ಸಿನ್ ವಾಸವಿ ಆಸ್ಪತ್ರೆಯಿಂದ ಬರುತ್ತಿದೆ. ಬ್ಯಾಂಕ್ ನಿಂದ ಹಣವನ್ನು ವಾಸವಿ ಆಸ್ಪತ್ರೆಗೆ ಹಣ ಸಂದಾಯ ಮಾಡುತ್ತಿದ್ದೇವೆ. ಶಾಸಕರ ಕಚೇರಿಗೆ ಹಣ ಕೊಡುತ್ತೇವೆ ಎನ್ನುವುದು ಶುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಯಾಕೆ ನಮ್ಮ ಆಸ್ಪತ್ರೆಯ ಹೆಸರು ಬಂದಿದೆ ಎನ್ನುವುದು ಗೊತ್ತಾಗುತ್ತಿಲ್ಲ, ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಈ ರೀತಿ ಮಾಡಿಲ್ಲ, ಇದೆಲ್ಲಾ ಶುದ್ದ ಸುಳ್ಳು ಎಂದರು.