ಬೆಂಗಳೂರು: ಆನೇಕಲ್ ತಾಲೂಕು ಬೊಮ್ಮಸಂದ್ರ ಪುರಸಭೆಯ ಉಪಾಧ್ಯಕ್ಷ ವಸಂತ್ರ ಮಗ ಗೌತಮ್ ಕೊಲೆಗೆ ಮಾರಕಾಸ್ತ್ರಗಳಿಂದ ಗ್ಯಾಂಗ್ವೊಂದು ದಾಳಿ ಮಾಡಿದೆ. ಹಳೆ ಚಂದಾಪುರದ ಬಳಿ ಘಟನೆ ನಡೆದಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಸ್ನೇಹಿತನ ಜನ್ಮದಿನಕ್ಕೆ ಕಾರಿನಲ್ಲಿ ಗೆಳೆಯರ ಜೊತೆಗೂಡಿ ಗೌತಮ್ ತೆರಳಿದ್ದ. ಹಳೆ ಚಂದಾಪುರದ ಬಳಿ ಟೀ ಕುಡಿಯಲು ಕಾರು ಅನ್ನು ನಿಲ್ಲಿಸಿದ್ದ ಗೌತಮ್. ಈ ವೇಳೆ, ಮೂರು ಕಾರಿನಲ್ಲಿ ಬಂದ ಹತ್ತಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಗೌತಮ್ ಮೇಲೆ ಲಾಂಗ್ ಬೀಸಿದಾಗ ಕೈಗಳಿಂದ ಅಡ್ಡಗಟ್ಟಿದ್ದಾನೆ. ಗೌತಮ್ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಿಂದ ಓಡಿ ಹೋಗಿದ್ದಾನೆ.
ಇನ್ನು ಆರೋಪಿಗಳು ಅಲ್ಲಿದ್ದ ಗೌತಮ್ ಸ್ನೇಹಿತ ಪ್ರಮೋದ್ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತ್ಯೊಯ್ದಿದ್ದಾರೆ. ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಉಪಾಧ್ಯಕ್ಷ ಮಗ ಗೌತಮ್ನನ್ನು ಸ್ಥಳಕ್ಕೆ ಕರೆಸುವಂತೆ ಧಮ್ಕಿ ಹಾಕಿದ್ದಾರೆ. ತದನಂತರ ಪ್ರಮೋದ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಪ್ರಮೋದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಕುರಿತು ಸೂರ್ಯಸಿಟಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ರೀಲ್ಸ್ ಮಾಡಲೆಂದು ಭಾವಿ ಪತಿಯನ್ನು ಪಾರ್ಕ್ಗೆ ಕರೆದ ಹುಡುಗಿ .. ಯುವಕನ ಕತ್ತು ಕೊಯ್ದ ಅಪ್ರಾಪ್ತೆ!
ಪತ್ನಿ ಸರಿಯಿಲ್ಲವೆಂದು ರಸ್ತೆ ಮಧ್ಯೆ ಚಾಕು ಇರಿದ ಪತಿ: ಪತ್ನಿ ಸರಿಯಿಲ್ಲ ಎಂದು ಹಾಡಹಗಲೇ ಪತಿಯೇ ಆಕೆಗೆ ಚಾಕು ಇರಿದಿರುವ ಘಟನೆ ಜೂನ್ 21 ರಂದು ಸಂಜೆ ಬಾಣಸವಾಡಿಯ ಸೇಂಟ್ ಜೋಸೆಫ್ ಚರ್ಚ್ ಬಳಿ ನಡೆದಿದೆ. ನಿಖಿತಾ (30) ತನ್ನ ಗಂಡ ದಿವಾಕರ್ನಿಂದ ಚಾಕು ಇರಿತಕ್ಕೊಳಗಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿದ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು.
ನಿಖಿತಾ ಹಾಗೂ ದಿವಾಕರ್ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅತಿಯಾದ ಮದ್ಯಪಾನದ ಚಟ ಹೊಂದಿದ್ದ ದಿವಾಕರನಿಂದ ದೂರವಾಗಿದ್ದ ನಿಖಿತಾ ಲಿಂಗರಾಜಪುರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇತ್ತೀಚಿಗೆ ಪುನಃಶ್ಚೇತನ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ದಿವಾಕರ್ ತನ್ನ ಚಿಕ್ಕಪ್ಪನ ಮಗ ಪ್ರತೀಭ್ ಮನೆಯ ಸಮೀಪದಲ್ಲಿ ವಾಸವಿದ್ದ.
ಪತ್ನಿ ಸರಿಯಿಲ್ಲ ಎಂದು ಅನುಮಾನ ಹೊಂದಿದ್ದ ದಿವಾಕರ್ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಜೂನ್ 21ರಂದು ಲಿಂಗಾರಾಜಪುರಂನ ಅವರ ಮನೆಯಿಂದ ಕರೆದೊಯ್ಯಲು ದಿವಾಕರ್ ಹಾಗೂ ಪ್ರತೀಭ್ ಬಂದಿದ್ದರು. ಪ್ರತೀಭ್ ಬೈಕ್ ಚಾಲನೆ ಮಾಡುತ್ತಿದ್ದರೆ ನಿಖಿತಾಳನ್ನು ಮಧ್ಯೆ ಕೂರಿಸಿ ಕರೆದೊಯ್ದಿದ್ದ ಆರೋಪಿಗಳು ಮಾರ್ಗ ಮಧ್ಯೆ ತಿರುವಿನಲ್ಲಿ ಆಕೆಯನ್ನು ಬೈಕಿನಿಂದ ಬೀಳಿಸಿದ್ದರು. ಬಳಿಕ ದಿವಾಕರ್, ನಿಖಿತಾಳ ಕುತ್ತಿಗೆ, ಹೊಟ್ಟೆ, ಎದೆ ಸೇರಿದಂತೆ ಐದು ಕಡೆ ಚಾಕು ಇರಿದಿದ್ದ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.