ಬೆಂಗಳೂರು: ಕೊರೊನಾ ಭೀತಿಯಿಂದ ಮುಂದೂಡಿದ್ದ ವಿಧಾನಮಂಡಲದ ಮಳೆಗಾಲದ ಅಧಿವೇಶನ, ಸೆಪ್ಟೆಂಬರ್ 21 ರಿಂದ 30 ರವರೆಗೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಈ ಹಿಂದೆ ಜೂನ್ ತಿಂಗಳಿನಲ್ಲಿ ಮಳೆಗಾಲದ ಅವೇಶನ ನಡೆಸಬೇಕಾಗಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಅಂತಿಮವಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ವಿಧಾನಸೌಧದಲ್ಲೇ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿಸಲಾಗಿದೆ.
ಅಗತ್ಯ ಬಿದ್ದರೆ ಅಧಿವೇಶನ ಎರಡು ದಿನ ವಿಸ್ತರಣೆ ಮಾಡುತ್ತೇವೆ ಎಂದ ಅವರು, ಅಧಿವೇಶನ ನಡೆಸುವ ಸಂಬಂಧ ತಾವು ಹಾಗೂ ಸ್ಪೀಕರ್ ಸೇರಿ ಚರ್ಚಿಸಿ ನಂತರ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರೈತನಿಂದಲೇ ಬೆಳೆ ಸಮೀಕ್ಷೆ: ಪ್ರತಿ ಬೆಳೆ ಸಮೀಕ್ಷೆಯನ್ನು ರೈತರೇ ನಡೆಸಬೇಕು. ಬೆಳೆಗಳ ಫೋಟೊ ತೆಗೆಸಿ ಸರ್ಕಾರಕ್ಕೆ ಮೊಬೈಲ್ ಆ್ಯಪ್ ಮೂಲಕ ವರದಿ ನೀಡಬೇಕು. ಬೆಳೆ ಹಾನಿಯಾದರೆ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ರೈತರೇ ಫೋಟೋ ಕಳಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆಗೆ ಒಂದು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಬಳಕೆಯಾಗದ ಬಿ ಕರಾಬು ಜಮೀನನ್ನು 4:1 ಅನುಪಾತದಲ್ಲಿ ಗುತ್ತಿಗೆ ಪಡೆದವರಿಗೆ ಮಾರಾಟ ಮಾಡುವ ಮಹತ್ವದ ನಿರ್ಧಾರವನ್ನು, ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು. ಪರಿಶಿಷ್ಠ ಜಾತಿಯ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಯ ಶಾಲೆ ವಿದ್ಯಾರ್ಥಿಗಳಿಗೆ ಊಟೋಪಚಾರ, ಸೌಲಭ್ಯ, ಕಿಟ್, ಶೂ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು 65.48 ಕೋಟಿ ಅನುದಾನ ಒದಿಗಸಲು ತೀರ್ಮಾನಿಸಲಾಗಿದೆ ಎಂದರು.
ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ ತಿಂಗಳವರೆಗೆ ಮುಂದೂಡಲಾಗಿದ್ದು, ಇತ್ತೀಚೆಗೆ ಜಾರಿ ಮಾಡಿದ್ದ ಸುಗ್ರೀವಾಜ್ಞೆಗೆ ಸಂಪುಟ ಅನುಮೋದನೆ ಕೊಟ್ಟಿದೆ. ಉಳಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 64 ಮೊಕದ್ದಮೆಗಳನ್ನು ಸಹ ಹಿಂಪಡೆಯಲಾಗಿದೆ. ರೈತರ ಪ್ರಕರಣ, ವೈಯಕ್ತಿಕ ಪ್ರಕರಣ ಸೇರಿದಂತೆ ಒಟ್ಟು 64 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಂಪನಿಯ ಷೇರು ಬಂಡವಾಳವನ್ನು ಒಂದು ಸಾವಿರ ಕೋಟಿಯಿಂದ 1,250 ಕೋಟಿಗೆ ಹೆಚ್ಚಳ, ಅತೃವೃಷ್ಟಿಯಿಂದಾಗಿ ಹಾನಿಗೊಳಗಾದ ಕೊಡುಗಿಗೆ ಮೂಲಭೂತ ಸೌಲಭ್ಯ ಒದಗಿಸಲು 15.25 ಕೋಟಿ ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಶಿವಮೊಗ್ಗ, ಭದ್ರಾವತಿ ರೈಲ್ವೇ ನಿಲ್ದಾಣಗಳ ನಡುವೆ ಸೇತುವೆ ನಿರ್ಮಾಣ ಮಾಡಲು 13.45 ಕೋಟಿ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಿನಿಸೌಧ ನಿರ್ಮಾಣಕ್ಕೆ 16.5 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.