ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಲಭ್ಯವಾದ ಕೂಡಲೇ ಪಂಚಮಸಾಲಿ ಲಿಂಗಾಯತರನ್ನ ಹಿಂದುಳಿದ ಪ್ರವರ್ಗ 2 ಎ ಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಇಂದು ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ಈ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳು ನೀಡಿದ ಭರವಸೆ ಹಿನ್ನೆಯಲ್ಲಿ ಪಂಚಮಸಾಲಿ ಲಿಂಗಾಯತರು ನಡೆಸಿದ್ದ ಹೋರಾಟ ತಾತ್ಕಾಲಿಕ ಅಂತ್ಯ ಕಂಡಿದೆ. ಸೋಮವಾರ ಮುಖ್ಯಮಂತ್ರಿಗಳು ಖಚಿತ ಭರವಸೆ ನೀಡದೇ ಹೋದರೆ ಸದನದಲ್ಲಿ ಧರಣಿ ನಡೆಸುವುದಾಗಿ ಶಾಸಕ ಬಸನಗೌಡ ಎಚ್ಚರಿಕೆ ನೀಡಿದ್ದರು.
ಸರ್ಕಾರ ಹಿಂಜರಿಯಬಾರದು: ಯತ್ನಾಳ್ ಎಚ್ಚರಿಕೆ
ಇಂದು ಸದನ ಪ್ರಾರಂಭವಾದ ನಂತರ ಪುನಃ ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಮನಸ್ಸು ಮಾಡಿದರೆ ಪಂಚಮಸಾಲಿಗಳ ಬೇಡಿಕೆಯನ್ನು ಈಡೇರಿಸಬಹುದು ಎಂದು ಹೇಳಿದರು. ಪಂಚಮಸಾಲಿಗಳ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಹಿಂಜರಿಯಬಾರದು ಎಂದರು.
ಇವತ್ತು ಬೇಡಿಕೆ ಮುಂದಿಟ್ಟು ಸಮುದಾಯದ ಸ್ವಾಮೀಜಿಯವರು ಧರಣಿ ನಡೆಸಿದ್ದಾರೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರವಾಗುತ್ತದೆ ಎಂದು ಎಚ್ಚರಿಸಿದರು. ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಪರಿಶೀಲಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಅದರ ಅನುಸಾರ ಹಿಂದುಳಿದ ವರ್ಗಗಳ ಆಯೋಗ ಕೂಡಾ ಕ್ರಮಕೈಗೊಂಡಿದ್ದು, ಪಂಚಮಸಾಲಿ ಸಮುದಾಯದ ಮುಖಂಡರನ್ನು ವಿಚಾರಣೆಗೆ ಕರೆದಿದೆ. ಈ ವಿಚಾರಣೆಯನ್ನು ಮುಗಿಸಿ ತ್ವರಿತವಾಗಿ ಆಯೋಗ ವರದಿ ನೀಡಲಿದೆ ಎಂದು ಹೇಳಿದರು.
ಓದಿ : ಪಂಚಮಸಾಲಿ ಹೋರಾಟ ಅಂತ್ಯ?: 6 ತಿಂಗಳು ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದ್ದೇಕೆ ಯತ್ನಾಳ್?
ಬೇಡಿಕೆ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ:
ಈ ಮಧ್ಯೆ ರಾಜ್ಯ ಸರ್ಕಾರ ಇಂತಹ ಬೇಡಿಕೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಅದರಿಂದಲೂ ವರದಿ ತರಿಸಿಕೊಳ್ಳಲಿದೆ ಎಂದರು. ಈ ವರದಿಗಳನ್ವಯ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರು ತಿಂಗಳಲ್ಲಿ ವರದಿ ತರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉನ್ನತ ಮಟ್ಟದ ಸಮಿತಿ ನೀಡುವ ವರದಿಗೆ ಶಕ್ತಿಯಿಲ್ಲ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಆರು ತಿಂಗಳ ಒಳಗೆ ತರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅವರ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ ನಂತರ ಪಂಚಮಸಾಲಿ ಹೋರಾಟವನ್ನು ಹಿಂಪಡೆಯುವಂತೆ ಸ್ವಾಮೀಜಿಗಳ ಮನ ಒಲಿಸಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೋರಿಕೊಂಡರು.
ಸಿಎಂ ಉತ್ತರಕ್ಕೆ ಸಮಾಧಾನಗೊಂಡ ಪಾಟೀಲ್
ಮುಖ್ಯಮಂತ್ರಿಗಳ ಉತ್ತರದಿಂದ ನನಗೆ ಸಮಾಧಾನವಾಗಿದೆ. ಆರು ತಿಂಗಳಲ್ಲಿ ಈ ವಿಷಯ ಇತ್ಯರ್ಥವಾಗಲಿ. ಮುಖ್ಯಮಂತ್ರಿಗಳಿಗೆ ಯತ್ನಾಳ್ ಅವರು ಧನ್ಯವಾದ ಸಲ್ಲಿಸಿದರು. ಒಂದು ವೇಳೆ ಇತ್ಯರ್ಥವಾಗದೆ ಇದ್ದರೆ ಪುನಃ ಹೋರಾಟದ ದಾರಿ ಹಿಡಿಯುತ್ತೇವೆ ಎಂದರು. ಧರಣಿ ವಾಪಸ್ ಪಡೆಯುವಂತೆ ಸ್ವಾಮೀಜಿ ಅವರಿಗೆ ಮನವಿ ಮಾಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.