ಬೆಂಗಳೂರು: ಕುಟುಂಬ ರಾಜಕೀಯ ಪಕ್ಷ ಎಂಬ ಟೀಕೆಗೆ ಒಳಗಾಗಿರುವ ಜೆಡಿಎಸ್ ಈ ಬಾರಿ ಚುನಾವಣೆ ಗೆಲುವಿಗೆ ಈಗಾಗಲೇ ಸಿದ್ದತೆ ನಡೆಸಿದೆ. ಪಂಚರತ್ನ ರಥಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರ ಬಳಿ ಸಾಗುತ್ತಿದೆ. ಮತ್ತೊಂದೆಡೆ ಪಕ್ಷದಲ್ಲಿ ಚುನಾವಣಾ ಆಕಾಂಕ್ಷಿಗಳ ಪಟ್ಟಿ ಕೂಡ ಹೆಚ್ಚುತ್ತಿದ್ದು, ಈ ಬಾರಿ ಪಕ್ಷ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದೆ.
ಈ ಗೆಲುವಿನ ಅಭ್ಯರ್ಥಿಗಳಿಗಾಗಿ ಪಕ್ಷವೊಂದು ಮೊದಲ ಬಾರಿ ಎಂಬಂತೆ ಕಾರ್ಪೋರೇಟ್ ಮಾದರಿ ಸಂದರ್ಶನಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಕುರಿತು ಸಂಪೂರ್ಣ ಚರ್ಚೆ ಪರಿಶೀಲನೆ ನಡೆಸಲಿದೆ. ಈ ಸಂದರ್ಶನದಲ್ಲಿ ಪಾಸ್ ಆದ ಅಭ್ಯರ್ಥಿಗಳ ಪಟ್ಟಿ ಹೈ ಕಮಾಂಡ್ ತಲುಪಲಿದ್ದು, ಬಳಿಕ ಇವರಿಗೆ ಟಿಕೆಟ್ ಘೋಷಣೆ ನಡೆಯಲಿದೆ. ಇದಕ್ಕಾಗಿ ಪಕ್ಷ ಅಭ್ಯರ್ಥಿಗಳ ಸಂದರ್ಶನಕ್ಕೆ ಪಕ್ಷ ವಿದ್ಯುಕ್ತವಾಗಿ ಚಾಲನೆ ನೀಡಿದೆ.
ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಸಂದರ್ಶನದಲ್ಲಿ ಹಾಲಿ ಶಾಸಕರನ್ನು ಹೊರತುಪಡಿಸಿ 126 ಮಂದಿಗೆ ಕರೆ ನೀಡಲಾಗಿದ್ದು, ನಿನ್ನೆ 38 ಮಂದಿ ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದಾರೆ. ಸಂದರ್ಶನಕ್ಕೆ ಬಂದವರ ವೈಯಕ್ತಿಕ ವಿವರವನ್ನು ಸಂಗ್ರಹಿಸಲಾಗಿದ್ದು, ಯಾವ ಕ್ಷೇತ್ರಗಳಲ್ಲಿ ಅವರು ಟಿಕೆಟ್ ಕೇಳಿದ್ದಾರೋ ಅಲ್ಲಿ ಸ್ಪರ್ಧಿಸಲು ಅವರಿಗೆ ಇರುವ ಅನುಕೂಲಗಳೇನು? ಅನಾನುಕೂಲಗಳೇನು? ಎಂಬುದು ಸೇರಿದಂತೆ ಅತಿಸೂಕ್ಷ್ಮ ಮಾಹಿತಿಗಳು ಅದರಲ್ಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳ ಸಂದರ್ಶನದಲ್ಲಿ ಆಕಾಂಕ್ಷಿಗೆ ಇರುವ ಅನುಕೂಲಗಳೇನು? ಸಮಸ್ಯೆ ಇದ್ದರೆ ಯಾವ ಭಾಗದಿಂದ ಸಮಸ್ಯೆ ಎದುರಾಗಬಹುದು ಅನ್ನುವುದನ್ನು ಪರಿಶೀಲಿಸಿ ಅದಕ್ಕೆ ಪರಿಹಾರವಿದೆಯೇ, ಇದ್ದರೆ ಏನು? ಪರಿಹಾರವೇ ಇಲ್ಲದಿದ್ದರೆ ಏನು ಅನ್ನುವವರೆಗೆ ಈ ಸಂದರ್ಶನದಲ್ಲಿ ಪ್ರಶ್ನೆಗಳು ಕರಾರುವಾಕ್ಕಾಗಿದೆ. ಈ ಸಂದರ್ಶನ ನಡೆಸುವ ಜವಾಬ್ದಾರಿಯನ್ನು ಐದು ತಂಡಗಳಿಗೆ ವಹಿಸಲಾಗಿದ್ದು, ದೆಹಲಿ, ಹೈದ್ರಾಬಾದ್, ಮುಂಬಯಿ, ಬೆಂಗಳೂರು ಸೇರಿದಂತೆ ಐದು ಭಾಗಗಳ ತಂಡಗಳು ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಿದೆ ಎಂದು ತಿಳಿದು ಬಂದಿದೆ.
ಇನ್ನು ಅಭ್ಯರ್ಥಿಯಾಗಲು ಬಯಸುವರ ಹಣಕಾಸಿನ ಪರಿಸ್ಥಿತಿಯಿಂದ ಹಿಡಿದು, ಅವರಿಗೆ ಕ್ಷೇತ್ರದಲ್ಲಿ ಯಾವ್ಯಾವ ಕಡೆಗಳಿಂದ ಸಮಸ್ಯೆ ಇದೆ ಅನ್ನುವುದನ್ನು ಪರಿಶೀಲಿಸಿ, ಅದರ ಪರಿಹಾರ ಕಾರ್ಯ ಹೇಗೆ ಎಂಬಲ್ಲಿಯವರೆಗೆ ಈ ತಂಡಗಳು ಪ್ರತ್ಯೇಕವಾಗಿ ಆಕಾಂಕ್ಷಿಗಳ ಬಳಿ ಮಾತನಾಡಿ ಸಲಹೆಗಳನ್ನು ನೀಡುತ್ತಿವೆ.
ಒಂದು ವೇಳೆ ಟಿಕೆಟ್ ಆಕಾಂಕ್ಷಿಗಳು ಕೌಟುಂಬಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅದರ ಪರಿಹಾರ ಕಾರ್ಯ ಹೇಗೆ ಎಂದೂ ಕೂಡ ಹೇಳುತ್ತಿರುವ ಈ ತಂಡ ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡಬಹುದು ಎಂಬ ಲೆಕ್ಕಚಾರ ನಡೆಸಿದೆ. ಇನ್ನು ಈ ಸಂದರ್ಶನದ ಬಳಿಕ ಅಂತಿಮವಾಗಿ ಯಾರಿಗೆ ಟಿಕೆಟ್ ಕೊಟ್ಟರೆ ಉಪಯೋಗವಿಲ್ಲ ಎಂಬ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ವರದಿ ನೀಡಲಿದೆ.
ಈ ವರದಿಯ ಆಧಾರದ ಮೇಲೆ ಟಿಕೆಟ್ ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಧರಿಸಲಿರುವ ಹೆಚ್.ಡಿ.ಕುಮಾರಸ್ವಾಮಿ ನಿಮಗೆ ಟಿಕೆಟ್ ಕೊಡುತ್ತೇವೆ ಅಂತಲೋ,ಟಿಕೆಟ್ ಕೊಡುವುದಿಲ್ಲ ಅಂತಲೋ ಸ್ಪಷ್ಟವಾಗಿ ಹೇಳಲಿದ್ದಾರೆ ಎಂದು ಉನ್ನತ ಮೂಲಗಳ ಹೇಳಿವೆ.
ಚುನಾವಣಾ ರಣತಂತ್ರ ಶರವೇಗದಲ್ಲಿ ಬದಲಾಗುತ್ತಿದ್ದು, ಇಂತಹ ಕಾಲದಲ್ಲಿ ಕಾರ್ಪೊರೇಟ್ ಮಾದರಿಯ ಸಂದರ್ಶನ ನಡೆಸಿರುವ ಜೆಡಿಎಸ್ ಕ್ರಮ ರಾಜಕೀಯ ವಲಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಪ್ರತಿ ರಾಜ್ಯದ ಒಂದು ಕ್ಷೇತ್ರದಲ್ಲಾದ್ರೂ ನಮ್ಮ ಶಾಸಕರಿರಬೇಕು: ಹೆಚ್.ಡಿ ದೇವೇಗೌಡ