ಬೆಂಗಳೂರು: ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರು, ಶಾಸಕರ ಜೊತೆ ಸಭೆ ನಡೆಸಿದ್ದು, ನಾಳೆ ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ ಕೋರ್ ಕಮಿಟಿ ಸಭೆ ನಡೆಸಿ ದೆಹಲಿಗೆ ವಾಪಸ್ ಆಗಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಾಳೆ ಬೆಳಗ್ಗೆ 9.30 ಕ್ಕೆ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲಿರುವ ಅರುಣ್ ಸಿಂಗ್, ಪಕ್ಷಕ್ಕೆ ಮುಂದಿನ ಟಾಸ್ಕ್ ನೀಡಲಿದ್ದಾರೆ. ಉಪ ಚುನಾವಣೆ ಸೇರಿದಂತೆ ಸದ್ಯದಲ್ಲೇ ಎದುರಾಗಲಿರುವ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು. ಯೋಗ ದಿನಾಚರಣೆ ಆಚರಣೆ ಸೇರಿದಂತೆ ಪಕ್ಷ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಚರ್ಚೆ ನಡೆಸಿ ಸಲಹೆ, ಸೂಚನೆ ನೀಡಲಿದ್ದಾರೆ.
ಇದನ್ನೂ ಓದಿ: ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ: ಅರುಣ್ ಸಿಂಗ್ ಖಡಕ್ ಎಚ್ಚರಿಕೆ
ಸಂಜೆ 4 ಗಂಟೆಗೆ ಕೋರ್ ಕಮಿಟಿ ಸಭೆ ನಡೆಸಲಿದ್ದು, ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯತೆ, ಶಾಸಕರ ಅಸಮಾಧಾನಕ್ಕೆ ಪರಿಹಾರ ಕಲ್ಪಿಸುವುದು ಸೇರಿದಂತೆ ರಾಜ್ಯ ಪ್ರವಾಸದ ಉದ್ದೇಶಿತ ಕಾರ್ಯವಾದ ಪಕ್ಷದ ಆಂತರಿಕ ಕಲಹಕ್ಕೆ ತೆರೆ ಎಳೆಯುವ ನಿರ್ಧಾರ ಪ್ರಕಟಿಸಲಿದ್ದಾರೆ. ನಂತರ ದೆಹಲಿಗೆ ವಾಪಸ್ ಆಗಲಿರುವ ಅರುಣ್ ಸಿಂಗ್ ಗೊಂದಲ ಪರಿಹಾರ ಸಂಬಂಧ ಹೈಕಮಾಂಡ್ಗೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ.