ಬೆಂಗಳೂರು/ಕೋಲಾರ /ತುಮಕೂರು: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ಕಲಂ 370 ಮತ್ತು 35A ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನ ರಾಜ್ಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಎದುರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಪಂಡಿತ್ ಶ್ಯಾಂ ಪ್ರಸಾದ್ ಮುಖರ್ಜಿ ಬಲಿದಾನಕ್ಕೆ ಇಂದು ನ್ಯಾಯ ಸಿಕ್ಕಿದೆ ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಕೇಂದ್ರದ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಕಾಂಗ್ರೆಸ್ ಪ್ರಮಾದ ಮಾಡಿತ್ತು. ಈಗ ಆ ಪ್ರಮಾದ ಸರಿಪಡಿಸಲಾಗಿದೆ. ಕಾಂಗ್ರೆಸ್ ಪ್ರಮಾದದಿಂದ ಭಯೋತ್ಪಾದಕತೆ ಹೆಚ್ಚಾಯ್ತು. ಪ್ರತ್ಯೇಕತಾ ಮನೋಭಾವ ಬೆಳೆಯಿತು. ಕೇಂದ್ರ ಸರ್ಕಾರದ ನಿರ್ಧಾರ ಕ್ರಾಂತಿಕಾರಕ ಎಂದರು. 68 ವರ್ಷದಿಂದ ಭಾರತವೇ ಬೇರೆ, ಕಾಶ್ಮೀರವೇ ಬೇರೆ ಎಂದು ಬಿತ್ತರಿಸಲಾಗ್ತಿದೆ. ಜಮ್ಮು-ಕಾಶ್ಮೀರಕ್ಕಾಗಿ ಸಾವಿರಾರು ಜನರು ಬಲಿದಾನ ಮಾಡಿದ್ದಾರೆ. ಜಮ್ಮು- ಕಾಶ್ಮೀರ ದೇಶದ ಒಂದು ಭಾಗ ಎಂದು ಮಾಡಿರುವುದು ಐತಿಹಾಸಿಕ ಕ್ರಮ ಎಂದರು.
ಭಜರಂಗದಳ, ವಿಹೆಚ್‌ಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ :
ಇಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದು ಮಾಡಿದ್ದು, ಕೋಲಾರದ ದೊಡ್ಡಪೇಟೆಯಲ್ಲಿ ಭಜರಂಗದಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ ಕೂಗ್ತಾ ಸಂಭ್ರಮಾಚರಿಸಿದರು.
ಅತ್ತ ತುಮಕೂರಿನಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ನಿರ್ಧಾರಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಇದು ಕೇಂದ್ರದ ಎನ್ಡಿಎ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ. ಇದರಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಇರುವವರೆಲ್ಲ ಒಂದೇ ದೇಶದ ಪ್ರಜೆಗಳು ಎಂಬ ಭಾವನೆ ಮೂಡಲಿದೆ. ಇದರಿಂದ ಶಾಂತಿ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡ-ಬೆಳಗಾವಿಯಲ್ಲೂ ಸಂಭ್ರಮಾಚರಣೆ:
370 ಕಲಂ ರದ್ದು ಪಡೆಸಿರುವ ಕ್ರಮ ಬೆಂಬಲಿಸಿ ಶ್ರೀರಾಮಸೇನಾ ಕಾರ್ಯಕರ್ತರು ಧಾರವಾಡದಲ್ಲಿ ಸಂಭ್ರಮಾಚರಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪಕ್ಕೆ ಆಗಮಿಸಿದ ಶ್ರೀರಾಮಸೇನಾ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ತಾತ್ಕಾಲಿಕವಾಗಿ ನೀಡಿದ್ದ ಸ್ಥಾನಮಾನ ತೆಗೆಯಲು 70 ವರ್ಷ ಬೇಕಾಯ್ತು. ಈ ದಿಟ್ಟ ಕ್ರಮ ಕೈಗೊಂಡ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತ ಬೆಳಗಾವಿಯ ನಗರದ ಶಿವಾಜಿ ಸರ್ಕಲ್ನಲ್ಲಿ ಸೇರಿದ್ದ ಹಲವಾರು ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಿಸಿದರು. ಕಳೆದು 70 ವರ್ಷಗಳಿಂದ ಭಾರತದಿಂದ ಜಮ್ಮು ಕಾಶ್ಮೀರವನ್ನು ದೂರ ಇಡಲಾಗಿತ್ತು. ಜೊತೆಗೆ ಅಲ್ಲಿ ಉಗ್ರರ ಚಟುವಟಿಕೆಗೆ ಸಹಾಯಕವಾಗುಂತೆ ಸರ್ಕಾರಗಳು ವರ್ತನೆ ತೋರುತ್ತಿದ್ದವು. ಆದರೆ, ಕೇಂದ್ರ ಸರ್ಕಾರ ಈ ವಿಧಿ ರದ್ದು ಮಾಡಿದ್ದು ದೇಶಕ್ಕೆ ಒಳ್ಳೆಯದು ಎಂದರು.