ಬೆಂಗಳೂರು: ಮಾದಕ ವಸ್ತು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಹಾಗೂ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಗಮನ ಸೆಳೆಯುವ ಸೂಚನೆ ಅಡಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಾದಕ ಪದಾರ್ಥವನ್ನು ಬಳಕೆ ಮಾಡುವ ಹಾಗೂ ಪೂರೈಸುವ ಜಾಲವನ್ನು ಮಟ್ಟ ಹಾಕುವಲ್ಲಿ ಸರ್ಕಾರ ನಿರತವಾಗಿದೆ. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಈ ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಿ ಶಿಕ್ಷೆಗೊಳಪಡಿಸಲಾಗಿದೆ. ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ ಪೊಲೀಸರು ಈ ವರ್ಷ ಆಗಸ್ಟ್‌ವರೆಗೆ ದಾಖಲಿಸಿಕೊಂಡಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ ಎಂದರು.
ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತಕ್ಕೆ ಎಎಪಿಯಿಂದ ದೂರು
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಚಟುವಟಿಕೆ ನಡೆಯದಂತೆ ತಡೆಯಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ ಪಿಡುಗಾಗಿ ಬೆಳೆದಿರುವ ಈ ಸಮಸ್ಯೆಯನ್ನು ಬೇರು ಸಹಿತ ಕಿತ್ತು ಹಾಕುವ ಕೆಲಸ ಆಗಬೇಕಿದೆ. ಇದಕ್ಕೆ ಪೊಲೀಸರ ಜತೆ ಜನ ಸಾಮಾನ್ಯರೂ ಕೈ ಜೋಡಿಸಬೇಕೆಂದು ಹೇಳಿದರು.
ಇದಕ್ಕೂ ಮುನ್ನ ಪ್ರಕಾಶ್ ರಾಥೋಡ್ ಮಾತನಾಡಿ, ಬೆಂಗಳೂರಿನಲ್ಲಿ ಡ್ರಗ್ಸ್ ಅವ್ಯಾಹತವಾಗಿದೆ. ಖಾಲಿ ಜಾಗಗಳು, ವಿವಾದಿತ ಮೈದಾನಗಳು, ಶಾಲಾ-ಕಾಲೇಜುಗಳ ಆವರಣ ಮಿನಿ ಪಂಜಾಬ್ ಆಗುತ್ತಿದೆ. ಡ್ರಗ್ಸ್ ತಡೆಯಲು ಸರ್ಕಾರ ಎಲ್ಲ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಟ್ಸ್ಆ್ಯಪ್ ಹಾಗೂ ಟೆಲಿಗ್ರಾಂಗಳಲ್ಲಿ ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡು ಡ್ರಗ್ಸ್ ಮಾರಾಟ ಮಾಡುವ ದಂಧೆಯನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಕೋಡ್ಗಳನ್ನು ನೀಡಿ ವ್ಯವಹಾರ ನಡೆಸಲಾಗುತ್ತಿದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯರಾದ ಭಾರತೀ ಶೆಟ್ಟಿ ಹಾಗೂ ತೇಜಸ್ವಿನಿ ಗೌಡ ಸಹ ಡ್ರಗ್ಸ್ ದಂಧೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ದಂಧೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ, ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಮಾದಕ ವಸ್ತು ಪತ್ತೆ : ಮಂಡ್ಯದಲ್ಲಿ ಮನೆ ಮಾಲೀಕರಿಗೆ ಶಾಕ್
ಡ್ರಗ್ಸ್ ವ್ಯಾಪಕಗೊಳ್ಳಲು ಪೊಲೀಸರು ಕಾರಣರಾಗಿದ್ದಾರೆ. ಪೂರೈಕೆದಾರರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ಸಿನ ಸಲೀಂ ಅಹ್ಮದ್ ಆರೋಪ ಮಾಡಿದರು. ಜೆಡಿಎಸ್ ಸದಸ್ಯ ಮರಿ ತಿಬ್ಬೇಗೌಡ ಮಾತನಾಡಿ, ‘ಸಾಮಾಜಿಕ ಪಿಡುಗಾಗಿ ಬದಲಾಗಿರುವ ಇದರ ನಿಯಂತ್ರಣಕ್ಕೆ ಯಾವ ವಿಶೇಷ ಕಾರ್ಯಕ್ರಮ ರೂಪಿಸಿದ್ದೀರಿ’ ಎಂದು ಪ್ರಶ್ನಿಸಿದರು. ಹುಕ್ಕಾ ಬಾರ್‌ಗಳು ಮಾದಕ ವಸ್ತು ಸೇವನೆಯ ಕೇಂದ್ರಗಳಾಗುತ್ತಿದೆ ಅಂತಾ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ನ ಮಂಜುನಾಥ ಭಂಡಾರಿ ಮತ್ತು ಎಂ. ನಾಗರಾಜ ಕೂಡ ಚರ್ಚೆಯಲ್ಲಿ ಭಾಗವಹಿಸಿದರು.