ಬೆಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಭೂ ಭರ್ತಿ ಘಟಕ ಕುಸಿದ ಹಿನ್ನೆಲೆಯಲ್ಲಿ ಅಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ಅಧ್ಯಯನ ನಡೆಸಲು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ನೇಮಕ ಮಾಡುವಂತೆ ಪಾಲಿಕೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಘನತ್ಯಾಜ್ಯ ಭೂಭರ್ತಿ ಘಟಕ ಕುಸಿದಿರುವ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿತು.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿ, ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಡೆಸುತ್ತಿದೆ. ಆದರೆ ಕಾಮಗಾರಿ ವೇಳೆ ಸೃಷ್ಟಿಯಾಗುತ್ತಿರುವ ತ್ಯಾಜ್ಯವನ್ನು ನಿರ್ವಹಣೆ ಮಾಡುವಲ್ಲಿ ಕಂಪನಿ ವಿಫಲವಾಗಿದೆ ಎಂದು ವಿವರಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಕಂಪನಿಯು ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ, ಅದರ ಎಲ್ಲ ಕಾಮಗಾರಿಗಳಿಗೂ ತಡೆ ನೀಡಿ ಆದೇಶಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಅಲ್ಲದೆ ಕಂಪನಿಯು ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸುತ್ತಿರುವ ಕುರಿತು ಮುಂದಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿತು.
ನಗರ ವ್ಯಾಪ್ತಿಯಲ್ಲಿ ಸರಿಯಾಗಿ ತ್ಯಾಜ್ಯ ವಿಲೇವಾರಿ ಆಗದೆ ಸಮಸ್ಯೆ ಉಂಟಾಗಿದ್ದರೂ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿರುವ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.