ಬೆಂಗಳೂರು: ರಾಜ್ಯದ ಜನರ ನಡುವೆ ಧಾರ್ಮಿಕ ದ್ವೇಷ ಬಿತ್ತುತ್ತಿರುವ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೇ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಇಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಇಂದು ಮಧ್ಯಾಹ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ವಕೀಲರು ತೆರಳಿದರು. ಧರ್ಮದ ಹೆಸರಿನಲ್ಲಿ ವಿವಿಧ ಧರ್ಮದ ವ್ಯಕ್ತಿಗಳ ನಡುವೆ ದ್ವೇಷ ಉಂಟುಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಲಿಖಿತ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲೇನಿದೆ: ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ದಾವಣಗೆರೆ, ತುಮಕೂರು, ಬೆಳಗಾವಿ, ಕಲಬುರಗಿ ಮತ್ತು ಇತರ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೆಲವು ವ್ಯಕ್ತಿಗಳು, ಸಂಘಟನೆಗಳು ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿದ್ದಾರೆ. ಮುಸ್ಲಿಂ ವ್ಯಾಪಾರಿಗಳು ಹಿಂದೂಗಳ ಹಬ್ಬ, ಜಾತ್ರೆಗಳಲ್ಲಿ ವ್ಯಾಪಾರ ನಡೆಸದಂತೆ, ಅಂಗಡಿಗಳನ್ನು ತೆರೆಯದಂತೆ ಬೆದರಿಕೆ ಒಡ್ಡುತ್ತಿದ್ದಾರೆ.
ಹಾಗೆಯೇ, ಅವರ ಬಳಿ ಹಿಂದೂ ಧರ್ಮದ ವ್ಯಕ್ತಿಗಳು ಸರಕು ಸಾಮಗ್ರಿ ಖರೀದಿಸದಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಶಾಂತಿಯುತ ಪ್ರದೇಶಗಳಲ್ಲಿಯೂ ಅಶಾಂತಿ ಏರ್ಪಡುತ್ತಿದೆ. ಜತೆಗೆ ಕಾನೂನು ಸುವ್ಯವಸ್ಥೆಯೂ ಹಾಳಾಗುತ್ತಿದೆ. ಬೆಂಗಳೂರಿನಂತಹ ನಗರದಲ್ಲಿ ಪುನೀತ್ ಕೆರೆಹಳ್ಳಿ, ಪ್ರಶಾಂತ್ ಸಂಬರಗಿ ಸೇರಿದಂತೆ ಅನೇಕ ಪುಂಡರ ಗುಂಪು ಜನರಿಗೆ ಮಾಹಿತಿ ನೀಡುವ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸದಂತೆ ತಡೆಯೊಡ್ಡುತ್ತಿದ್ದಾರೆ. ಇದೇ ರೀತಿ ಕೆಲ ಸಂಘಟನೆಗಳ ವ್ಯಕ್ತಿಗಳು ರಾಜ್ಯದ ವಿವಿಧೆಡೆ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದು, ಹಿಂದೂಯೇತರ ವ್ಯಾಪಾರಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಾಂಸದ ವ್ಯಾಪಾರಿಗಳಿಗೆ ಧಕ್ಕೆಯಾಗುವಂತೆ ಹಲಾಲ್ ವಿವಾದ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 62 ಮಂದಿಗೆ ಕೋವಿಡ್ ಪತ್ತೆ: 70 ಸೋಂಕಿತರು ಚೇತರಿಕೆ
ಸಂವಿಧಾನದ ಅಡಿ ಲಭ್ಯವಿರುವ ಜೀವಿಸುವ, ವ್ಯಾಪಾರ ಮಾಡುವ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ರಾಜ್ಯದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಈ ಸಂಬಂಧ ನಗರದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ, ಪುಂಡರ ಆಟಾಟೋಪಕ್ಕೆ ಬೆಂಬಲವಾಗಿರುವಂತೆ ವರ್ತಿಸುತ್ತಿರುವುದು ಪೊಲೀಸರ ನಿಷ್ಕ್ರಿಯತೆಯನ್ನು ಸಾಬೀತುಪಡಿಸುತ್ತದೆ. ಆದ್ದರಿಂದ ಇಂತಹ ಗೂಂಡಾ ವರ್ತನೆಯ ವ್ಯಕ್ತಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.