ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಯು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದ ಹಿನ್ನೆಲೆ ಹೈಕೋರ್ಟ್ ದೂರನ್ನು ಇತ್ಯರ್ಥಪಡಿಸಿದೆ.
2021ರ ನವೆಂಬರ್ 30ರಂದು ಸಿಡಿ ಪ್ರಕರಣದ ವಿಚಾರಣೆ ನಡೆಯುವ ವೇಳೆ ಉಜಿರೆಯ ಶ್ರೀಧರ್ ಭಟ್ ಅರೆನಗ್ನವಾಗಿ ಕಾಣಿಸಿಕೊಂಡಿದ್ದರು. ಇದರಿಂದ ತಮ್ಮ ವಾದ ಮಂಡನೆಗೆ ಕಿರಿಕಿರಿಯಾಗಿದೆ ಎಂದು ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ರಮಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಹೈಕೋರ್ಟ್ ಶ್ರೀಧರ್ ಭಟ್ ಅವರನ್ನು ಪತ್ತೆ ಮಾಡಿ ನೋಟಿಸ್ ಜಾರಿಗೆ ಆದೇಶಿಸಿತ್ತು.
ಗುರುವಾರ ಸಿಡಿ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಈ ಕುರಿತು ಪ್ರಸ್ತಾಪಿಸಿ, ಅರೆನಗ್ನವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ ಕ್ಷಮೆ ಕೋರಿದ್ದಾರೆ. ಅವರ ವಿರುದ್ಧದ ದೂರನ್ನು ಮುಂದುವರೆಸಬೇಕೆ ಎಂದು ಕೇಳಿದರು. ಇದಕ್ಕೆ ಇಂದಿರಾ ಜೈಸಿಂಗ್ ಪ್ರತಿಕ್ರಿಯಿಸಿ, ತಪ್ಪಿನ ಅರಿವಾಗಿ ಕ್ಷಮೆ ಕೋರಿರುವುದರಿಂದ ಆಕ್ಷೇಪಣೆಯೇನೂ ಇಲ್ಲ. ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದರು.
ಇದನ್ನೂ ಓದಿ: ಹಿಜಾಬ್ ಧರಿಸಲು ನಿರ್ಬಂಧಿಸಿದ ಉಡುಪಿ ಸರ್ಕಾರಿ ಕಾಲೇಜು: ಫೆ.8ಕ್ಕೆ ಹೈಕೋರ್ಟ್ ವಿಚಾರಣೆ
ಹಿರಿಯ ವಕೀಲೆಯ ಹೇಳಿಕೆ ಪರಿಗಣಿಸಿದ ಪೀಠ, ಅರೆನಗ್ನವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ ನ್ಯಾಯಾಲಯವೂ ಸೇರಿದಂತೆ ಅಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರ ಕ್ಷಮೆಯಾಚಿಸಿದ್ದಾರೆ. ಕಣ್ತಪ್ಪಿನಿಂದ ಆಗಿದೆ ಎಂದು ವಿನಯಪೂರ್ವಕವಾಗಿ ತಿಳಿಸಿದ್ದಾರೆ. ಜತೆಗೆ ತಪ್ಪಿನ ಅರಿವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ದೂರನ್ನು ಇಲ್ಲಿಗೆ ಕೈಬಿಡಲಾಗುತ್ತಿದೆ. ಮುಂದೆ ಅವರು ಎಚ್ಚರಿಕೆಯಿಂದ ಇರಬೇಕು ಎಂದು ಆದೇಶಿಸಿ, ದೂರು ಇತ್ಯರ್ಥಪಡಿಸಿತು.
2021ರ ನವೆಂಬರ್ 30ರಂದು ಸಿಡಿ ಕೇಸ್ ವಿಚಾರಣೆ ನಡೆಯುತ್ತಿದ್ದ ವೇಳೆ ಆನ್ಲೈನ್ ಕಲಾಪದಲ್ಲಿ 'ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ' ಹೆಸರಿನಲ್ಲಿ ಲಾಗಿನ್ ಆಗಿ, ಇವರು ಅರೆನಗ್ನವಾಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಿಡಿ ಪ್ರಕರಣದ ಯುವತಿ ಪರ ಹಿರಿಯ ವಕೀಲೆ, ಮಹಿಳಾ ವಕೀಲೆ ವಾದ ಮಂಡಿಸುವ ವೇಳೆ ಹೀಗಾದರೆ ಹೇಗೆ. ನ್ಯಾಯಾಲಯದ ಘನತೆ ಏನಾಗಬೇಕು. ಇಂತದ್ದನ್ನೆಲ್ಲಾ ನೋಡಿಕೊಂಡು ವಾದ ಮಂಡಿಸಲು ನನಗೆ ಮುಜುಗರವಾಗುತ್ತಿದೆ. ಹೀಗಾಗಿ, ವ್ಯಕ್ತಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಧರ್ ಭಟ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.