ಬೆಂಗಳೂರು: ರಾಜ್ಯದಲ್ಲಿ ಮತ್ತೆ 15 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿವೆ.
ನಿನ್ನೆ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಶೇ.80ರಷ್ಟು ಸಚಿವರು ಲಾಕ್ಡೌನ್ ವಿಸ್ತರಣೆ ಮಾಡಿ ಎಂಬ ಮಾತು ಹೇಳಿದ್ದಾರೆ. ಇದರ ಮಧ್ಯೆ ನಾಳೆ ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿ ತದನಂತರ ಅಧಿಕೃತವಾಗಿ ಪ್ರಕಟಣೆ ಹೊರಹಾಕುವ ಸಾಧ್ಯತೆ ಇದೆ. ರಾಜ್ಯದ 14 ಜಿಲ್ಲೆಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚು ಪ್ರಕರಣ ಕಂಡು ಬಂದಿವೆ. ಹೀಗಾಗಿ ಈ ಜಿಲ್ಲೆಗಳಲ್ಲಿ ರೆಡ್ ಝೂನ್ ಘೋಷಣೆ ಮಾಡಿ ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಲಾಕ್ಡೌನ್ ಮುಂದುವರಿಸುವ ಸಾಧ್ಯತೆ ಇದೆ.
ಸಚಿವ ಸಂಪುಟದ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್ಡೌನ್ ಮುಕ್ತಾಯದವರೆಗೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬೇಡಿ ಎಂಬ ಮಾತು ಹೇಳಿದ್ದರು. ಮುಂದಿನ 15 ದಿನ ಲಾಕ್ಡೌನ್ ವಿಸ್ತರಣೆ ಮಾಡುವುದು ಒಳ್ಳೆಯದು ಎಂದು ಸಚಿವರು ತಮ್ಮ ಅಭಿಪ್ರಾಯ ಹೊರಹಾಕಿರುವ ಕಾರಣ ಬಿಎಸ್ವೈ ಈ ನಿರ್ಧಾರಕ್ಕೆ ಕೈ ಹಾಕುವ ಸಾಧ್ಯತೆ ಇದೆ.
ಇದರ ಮಧ್ಯೆ ಈಗಾಗಲೇ ಕೊರೊನಾ ಕಂಡು ಬಂದಿರುವ ಜಿಲ್ಲೆಗಳಲ್ಲಿ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳನ್ನಾಗಿ ಘೋಷಣೆ ಮಾಡಿ ಉಳಿದ ಜಿಲ್ಲೆಗಳ ಮೇಲಿನ ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ 197 ಕೊರೊನಾ ಸೋಂಕಿತ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ 30 ಗುಣಮುಖರಾಗಿ ಮನೆಗೆ ತೆರಳಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿವೆ.