ಬೆಂಗಳೂರು: ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಬಳ್ಳಾರಿಯ ಶಬರಯ್ಯ ಹಾಗೂ ತುಮಕೂರಿನ ಜಾವೇದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಇದೇ ವೇಳೆ ಪ್ರಕರಣದ ನಾಲ್ಕನೇ ಆರೋಪಿ ಮಹಿಳೆಗೆ ಷರತ್ತುಬದ್ಧ ಜಾಮೀನು ಪಡೆದುಕೊಳ್ಳಲು ಅವಕಾಶ ನೀಡಿದೆ.
ಲಾರಿ ಮಾಲೀಕಳಾಗಿರುವ ಜರೀದಾ ಬೇಗಂ ತನಿಖಾಧಿಕಾರಿ ಎದುರು ಮುಂದಿನ 15 ದಿನಗಳಲ್ಲಿ ಹಾಜರಾಗಬೇಕು. ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ತನಿಖಾಧಿಕಾರಿ ಒಪ್ಪುವಂತಹ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ನೀಡಬೇಕು. ಇಂತಹುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಸಾಕ್ಷ್ಯ ನಾಶಪಡಿಸಬಾರದು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಬಳ್ಳಾರಿಯ ಆಹಾರ ಶಿರಸ್ತೇದಾರ್ ರವಿಕುಮಾರ್ ವಿ. ರಾಥೋಡ್ ನೀಡಿದ ಮಾಹಿತಿ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು 2020ರ ನ.9ರಂದು ನಗರದ ಹೊರವಲಯದ ಬೆಂಗಳೂರು ಹೆದ್ದಾರಿಯಲ್ಲಿರುವ ಹಲಕುಂಂದಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಲಾರಿಯೊಂದನ್ನು ತಡೆದು ಪರಿಶೀಲಿಸಿದ್ದರು. ಈ ವೇಳೆ ಲಾರಿಯಲ್ಲಿ ಅನ್ನಭಾಗ್ಯ ಯೋಜನೆ ಅಡಿ ವಿತರಿಸಬೇಕಿದ್ದ 8.50 ಲಕ್ಷ ಮೌಲ್ಯದ ಅಕ್ಕಿ ಚೀಲಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಕೆಪಿಎಸ್ಸಿ ಎಸ್ಡಿಎ ಪರೀಕ್ಷೆ ಮುಂದೂಡಿಕೆ
ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ-1955 ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ, ಬಳ್ಳಾರಿಯ ಗುಗ್ಗರಹಟ್ಟಿ ನಿವಾಸಿ ಶಬರಯ್ಯ ಸಂಗ್ರಹಿಸಿ ಕೊಟ್ಟ ಅಕ್ಕಿಯನ್ನು ತುಮಕೂರಿನ ಜಾವೇದ್ ತನ್ನ ಊರಿಗೆ ತಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ಮುಗ್ಧರಾಗಿದ್ದು ಯಾವುದೇ ಅಪರಾಧ ಎಸಗಿಲ್ಲ. ಜತೆಗೆ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧರಿರಲು ಸಿದ್ದರಿದ್ದಾರೆ. ಲಾರಿ ಚಾಲಕ ಅಲ್ತಫ್ ಅಹ್ಮದ್ಗೆ ಈಗಾಗಲೇ ಜಾಮೀನು ನೀಡಲಾಗಿದೆ. ಅದರಂತೆ ಅರ್ಜಿದಾರರಿಗೂ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಸರ್ಕಾರದ ಪರ ವಕೀಲರು ವಾದಿಸಿ, ಆರೋಪಿಗಳು ವೃತ್ತಿಪರ ಅಪರಾಧಿಗಳಾಗಿದ್ದಾರೆ. ಈ ಹಿಂದೆಯೂ ಇವರ ವಿರುದ್ಧ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೂಡ ನೀಡಲಾಗಿತ್ತು. ಹಾಗಿದ್ದೂ ಆರೋಪಿಗಳು ಮತ್ತದೇ ಕೃತ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.