ಬೆಂಗಳೂರು : ಗ್ರಾಚ್ಯುಟಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 8 ದಿನಗಳನ್ನು ಪೂರೈಸಿದೆ. ಇದೀಗ ಅಂತಿಮವಾಗಿ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ್ದಾರೆ. "ಒಂದು ವೇಳೆ ಬೇಡಿಕೆಗಳನ್ನು ಈಡೇರಿಸುವ ಆದೇಶ ನೀಡದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರೊಂದಿಗೆ ಮುತ್ತಿಗೆ ಹಾಕಲಾಗುವುದು" ಎಂದು ಸಿ.ಐ.ಟಿ.ಯು ಸಂಘಟನೆಯ ಅಧ್ಯಕ್ಷೆ ಎಸ್.ವರಲಕ್ಷ್ಮಿ ಎಚ್ಚರಿಸಿದ್ದಾರೆ.
ಬೇಡಿಕೆಗಳೇನು?: "ರಾಜ್ಯದ ಪ್ರತಿಯೊಂದು ಮಗುವಿಗೂ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಖಾತ್ರಿಪಡಿಸಲು ಅಂಗನವಾಡಿ ಕೇಂದ್ರದ ಕೆಲಸಗಳ ಸ್ವರೂಪ ಬದಲಾಯಿಸಿ ಮೇಲ್ದರ್ಜೆಗೆ ಏರಿಸಬೇಕು. ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಕೊಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡಬೇಕೆಂಬುದು ಹೋರಾಟದ ಪ್ರಮುಖ ಬೇಡಿಕೆಗಳಾಗಿವೆ. ಪ್ರತಿಭಟನೆ ಶುರುವಾಗಿ ಎಂಟು ದಿನಗಳಾದರೂ, ಕೆಲಸ ಸ್ಥಗಿತವಾಗಿರುವ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಅವರ ನಿರ್ಲಕ್ಷ್ಯತನ ಖಂಡನೀಯ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರ ಸಂಘದ ನೋಂದಣಿ: "ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವೃತ್ತಿ ಸಂಘಗಳ ಕಾಯ್ದೆ 1926 ರ ಪ್ರಕಾರ ನೋಂದಾವಣೆಗೊಂಡು ಇಲಾಖೆಯಿಂದ ಸದಸ್ಯತ್ವದ ಪಡೆದಿದ್ದು, ಯಾವ ಸಂಘವನ್ನು ಪರಿಗಣಿಸಬೇಕು ಎಂದು ಕೂಡಾ ತೀರ್ಮಾನಿಸುವ ಅಗತ್ಯವಿದೆ. ಇದರಲ್ಲೂ ಇಲಾಖೆ ತಪ್ಪು ಎಸಗುತ್ತಿದೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲ ಕಳೆಯುವ ಬದಲಿಗೆ ಆದೇಶ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆದೇಶ ಬರುವ ತನಕವೂ ಹೋರಾಟ ಮುಂದುವರೆಯುತ್ತದೆ" ಎಂದು ಅವರು ಹೇಳಿದರು.
"ಜನವರಿ 3ರಂದು ಮುಷ್ಕರದ ನೋಟೀಸನ್ನು ಸ್ವತಃ ಸಚಿವರ ಬಳಿ ನೀಡಿ ಚರ್ಚಿಸಲಾಗಿದೆ. 2 ಬಾರಿ ನಿರ್ದೇಶಕರ ಹಂತದ ಸಭೆಗಳಾಗಿವೆ. ಕಳೆದ ಡಿಸೆಂಬರ್‌ನಲ್ಲಿಯೂ ಫ್ರೀಡಂ ಪಾರ್ಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಚರ್ಚೆಗೆ ಬರುತ್ತಿಲ್ಲ" ಎಂದು ದೂರಿದರು.
- — Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 30, 2023 " class="align-text-top noRightClick twitterSection" data="
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 30, 2023
">— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 30, 2023
ಚೇತನ್ ಅಹಿಂಸಾ ಬೆಂಬಲ: ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಅಂಗನವಾಡಿ ನೌಕರರ ಪ್ರತಿಭಟನೆಗೆ ನಟ ಚೇತನ್ ಅಹಿಂಸಾ ನೈತಿಕ ಬೆಂಬಲ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ರಚನಾತ್ಮಕ ಬದಲಾವಣೆಗೆ ಆಗ್ರಹಿಸಿ ತಮ್ಮನ್ನು ಶಿಕ್ಷಕಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ಸಮಾಜದ ಅತ್ಯಂತ ನಿರ್ಗತಿಕರಿಗೆ ಅಂಗನವಾಡಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮುಂದುವರಿದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ.. ಸರ್ಕಾರದ ವಿರುದ್ಧ ಆಕ್ರೋಶ