ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಅಂಗನವಾಡಿ ನೌಕರರ ಸಂಘಗಳ ವಿವಿಧ ಪದಾಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಇಂದು ಸಭೆ ನಡೆಸಲಾಯಿತು.
ಓದಿ: ಮುಖ್ಯ ಕಾರ್ಯದರ್ಶಿ ಜೊತೆಗಿನ ಸಂಧಾನ ಸಭೆ ಸಫಲ: ಅಂಗನವಾಡಿ ಕಾರ್ಯಕರ್ತೆಯರ ‘ಬೆಂಗಳೂರು ಚಲೋ’ ಅಂತ್ಯ
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳಾದ ಇಡಗಂಟು, ಪಿಂಚಣಿ, ಗೌರವಧನ ಹೆಚ್ಚಳ, ಹೆಚ್ಚುವರಿ ಕೆಲಸದ ಹೊರೆ ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಈ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಬೇಡಿಕೆಗಳನ್ನು ಸರ್ಕಾರದ ನಿಯಮಗಳಡಿಯಲ್ಲಿ ಪರಿಹರಿಸುವ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹಾಗೂ ಕೇಂದ್ರ ಸರ್ಕಾರದ ಹಂತದಲ್ಲಿ ಕೆಲವೊಂದು ಬೇಡಿಕೆಗಳನ್ನು ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಕೋವಿಡ್ ವಾರಿಯರ್ಸ್ ಆಗಿದ್ದ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತರಿಗೆ 30 ಲಕ್ಷ ರೂ. ಪರಿಹಾರ ನೀಡುವ ಬಗ್ಗೆಯೂ ಸಿಎಂ ಬಳಿ ಚರ್ಚಿಸಿ ಪರಿಹಾರದ ಮೊತ್ತ ಕೊಡಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಅಂಗನವಾಡಿ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ನಿನ್ನೆಯಿಂದ ನಗರದಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಸಚಿವರು, ಇಂದು ಅಂಗನವಾಡಿ ಕಾರ್ಯಕರ್ತರ ಮುಖಂಡರ ಜೊತೆಗೆ ಸಭೆ ನಡೆಸಿ ಸುಖಾಂತ್ಯಗೊಳಿಸಿದ್ದಾರೆ.