ಬೆಂಗಳೂರು: ಹಿಂದುತ್ವ ಅಂದರೆ ವಿರೋಧದ ವಿಚಾರ ಅಂತಾರೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಯೋಗ್ಯವಿಲ್ಲದವರಿಗೆ ಮಾತ್ರ ಹಿಂದುತ್ವ ಅರ್ಥವಾಗಲ್ಲ. ಇತಿಹಾಸ ಗೊತ್ತಿಲ್ಲದ ಮೂರ್ಖರು ದೇಶದಲ್ಲಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಮತ್ತೆ ಮತ್ತೆ ಸಾವರ್ಕರ್ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೇದಗಳಿಗೆ ಚೌಕಟ್ಟು ಹಾಕೋಕೆ ಹೊರಟ್ರು. ಅವರನ್ನು ನಾನು ಅಜ್ಞಾನಿಗಳು ಅಂತ ಕರೆಯಲ್ಲ. ಸತ್ಯ ಅರ್ಥ ಆಗಿದ್ದರೂ ಒಪ್ಪಿಕೊಳ್ಳುವ ಶಕ್ತಿ ಅವರಲಿಲ್ಲ, ಅದಕ್ಕಾಗಿ ಆರ್ಯರು ಮಧ್ಯ ಏಷ್ಯಾದಿಂದ ಬಂದವರು ಅಂತಾರೆ. ಪೂರ್ವಾಗ್ರಹ ಪೀಡಿತ ಪಿಂಡಗಳು ಅದನ್ನೇ ಹೇಳ್ತಾರೆ. ಅಂತಹ ಮೂಢರಿಗೆ ನಾನು ಹೀಗೇ ಹೇಳೋದು ಎಂದು ವಿಚಾರವಾದಿಗಳ ವಿರುದ್ಧ ಅನಂತ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಲವರು ಭ್ರಮೆಯಲ್ಲೇ ಬದುಕುತ್ತಿದ್ದಾರೆ. ಅಂತವರಿಗೆ ಹೆಗಡೆ ಭಾಷಣೆ ವಿರೋಧವಾಗಿ ಕಾಣಬಹುದು. ಸಿಎಎ ಬಗ್ಗೆ ಯಾವುದೇ ವಿವಾದವಿಲ್ಲ, ಇದು ವಿರೋಧಿಸಿದವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಪೂರ್ವಾಗ್ರಹದಿಂದ ವಿರೋಧಿಸುತ್ತಿದ್ದಾರೆ. ಕೆಲವರಿಗೆ ಬ್ರಾಹ್ಮಣರನ್ನ ಕಂಡರೆ ಬೈಯ್ಯುವುದೇ ಆಗಿದೆ. ಹಿಂದುತ್ವವನ್ನ ವಿರೋಧಿಸುವುದೇ ಅವರ ಕೆಲಸವಾಗಿದೆ. ಬೆಂಗಳೂರನ್ನು ಮಾತ್ರ ಅಲ್ಲ, ಜಗತ್ತನ್ನೇ ಹಿಂದುತ್ವದ ಕ್ಯಾಪಿಟಲ್ ಆಗಿ ಮಾಡಬೇಕು. ಇದರ ಬಗ್ಗೆ ನಾವು ಯೋಜನೆ ರೂಪಿಸಬೇಕು. ಈ ಬಗ್ಗೆ ಅರ್ಥವಿಲ್ಲದ ಗೂಬೆಗಳು ಏನು ಬೇಕಾದರೂ ಮಾಡಲಿ ಎಂದರು.
ಇತ್ತೀಚೆಗೆ ಸಾವರ್ಕರ್ ಬಗ್ಗೆ ಮತ್ತೆ ವಿವಾದಗಳು ಹೊರಬೀಳುತ್ತಿವೆ. ರಾಹುಲ್ ಸಾವರ್ಕರ್ ವಾದ, ಕಪಿಲ್ ಸಿಬಲ್ ಸಾವರ್ಕರ್ ವಾದ ಅಂತ ಆಗುತ್ತಿದೆ. ಯುದ್ಧ ನೀತಿಯಲ್ಲಿ ಎರಡು ವಿಧವಿದೆ, ಮತ್ತೊಬ್ಬರ ಸಾವೇ ಜಯವನ್ನ ತಂದುಕೊಡುತ್ತದೆ. ಸಾವು ಜಯವನ್ನ ಗುರ್ತಿಸುತ್ತಿದೆ. ಆದರೆ ಇವತ್ತು ತಂತ್ರವಿಲ್ಲ, ಕುತಂತ್ರವೇ ತುಂಬಿದೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಆರೋಪಿಸಿದರು.
ರಾಷ್ಟ್ರೀಯತೆಯ ಬಗ್ಗೆಯೇ ಇಲ್ಲಿ ಚರ್ಚೆಯಾಗುತ್ತದೆ. ಅಮೆರಿಕದಲ್ಲಿ ಹೋಗಿ ಮಾತನಾಡಲಿ, ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಬಗ್ಗೆ ಮಾತನಾಡಲಿ. ರಾಷ್ಟ್ರೀಯತೆಯ ಬಗ್ಗೆ ಇಲ್ಲಿಯೇ ಕೆಲವರು ಚರ್ಚೆ ಮಾಡ್ತಾರೆ. ಅಂತವರನ್ನ ನಾನು ಎಡಬಿಡಂಗಿಗಳು ಎನ್ನುತ್ತೇನೆ. ವಿತಂಡವಾದಕ್ಕೆ ನಾವು ಅವಕಾಶ ಕೊಡಬೇಕಾ? ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ನಾವು ಒಪ್ಪಿಕೊಳ್ಳಬೇಕಾ? ಚರ್ಚೆ ದೇಶಕ್ಕೆ ಪೂರಕವಾಗಿರಬೇಕು. ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.