ಬೆಂಗಳೂರು: ಹಾಡಹಗಲೇ ಜನದಟ್ಟಣೆ ಪ್ರದೇಶವೊಂದರ ಸ್ಕೈವಾಕ್ ಮೇಲೆಯೇ ಪಂಚೆಯಿಂದ ನೇಣು ಬಿಗಿದುಕೊಳ್ಳುವ ಮೂಲಕ ವೃದ್ಧನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರು - ತುಮಕೂರು ಹೆದ್ದಾರಿಯ ಎಂಟನೇ ಮೈಲಿ ಬಳಿಯಿರುವ ಸ್ಕೈವಾಕ್ನಲ್ಲಿ ಈ ದುರ್ಘಟನೆ ನಡೆದಿದೆ. ದಾಸರಹಳ್ಳಿಯ ಕಲ್ಯಾಣನಗರ ನಿವಾಸಿಯಾದ ಮೋಹನ್ ದಾಸ್(74) ಇಂದು ಮಧ್ಯಾಹ್ನ ಪಂಚೆಯಿಂದ ಸ್ಕೈವಾಕ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೋಹನ್ ದಾಸ್, ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕಾಗಮಿಸಿದ ಪೀಣ್ಯ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.