ಬೆಂಗಳೂರು: ಪಶು ಸಂಜೀವಿನಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿ ಎಲ್ಲಾ ಜಿಲ್ಲೆಗೂ ಪಶು ಆ್ಯಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಭಾರತಿ ಶೆಟ್ಟಿ, ಪ್ರಾಣಿಗಳಿಗಾಗಿ ಆ್ಯಂಬುಲೆನ್ಸ್ ಒದಗಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಪ್ರಾಣಿಗಳ ರಕ್ಷಣೆ ಆಗಬೇಕು ಎಂದು ಪಶು ಸಂಜೀವಿನಿ ಯೋಜನೆ ಅಡಿ 15 ಜಿಲ್ಲೆಗೆ ಆ್ಯಂಬುಲೆನ್ಸ್ ಕೊಡಲಾಗಿದೆ. ಸದ್ಯದಲ್ಲೇ ಉಳಿದ ಜಿಲ್ಲೆಗೂ ಈ ಸೇವೆ ವಿಸ್ತರಣೆ ಮಾಡಲಾಗುತ್ತದೆ. ಆ್ಯಂಬುಲೆನ್ಸ್ ಬಳಕೆಗೆ ಸಹಾಯವಾಣಿ ಇದೆ. ಆ್ಯಂಬುಲೆನ್ಸ್ ಬಂದ ನಂತರ ಸಾಕಷ್ಟು ಜೀವ ಉಳಿಸಲಾಗಿದೆ. ಯೋಜನೆಯ ಕುರಿತು ಇನ್ನಷ್ಟು ಪ್ರಚಾರಕ್ಕೂ ಸೂಚನೆ ನೀಡಲಾಗುತ್ತದೆ ಎಂದರು.
ಕಂದಾಯ ಸಚಿವ ಅಶೋಕ್ ಮಾತನಾಡಿ, ಪ್ರಚಾರ ಮಾಡುವ ಇಲಾಖೆ ನಮ್ಮಲ್ಲಿಯೇ ಇದೆ, ಅಗತ್ಯ ಪ್ರಚಾರ ಕಲ್ಪಿಸಲಾಗುತ್ತದೆ. ಡಿಸಿ, ತಹಶೀಲ್ದಾರ್ ಕಚೇರಿಯಲ್ಲಿ ಫಲಕ ಹಾಕಲಾಗುತ್ತದೆ ಎಂದರು.
ಖಾಲಿ ಹುದ್ದೆ ಭರ್ತಿಗೆ ಕ್ರಮ:
ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶಶಿಲ್ ನಮೋಷಿ ಅವರು ಪಶು ಸಂಗೋಪನೆ ಆಸ್ಪತ್ರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಲಿ ಹುದ್ದೆ ಭರ್ತಿ ಕುರಿತು ಹಣಕಾಸು ಇಲಾಖೆಯಲ್ಲಿ ಕಡತ ಬಾಕಿ ಇದೆ. ಕೊರೊನಾ ಕಾರಣಕ್ಕೆ ನೇಮಕಾತಿಗೆ ಸಮ್ಮತಿ ಸಿಕ್ಕಿರಲಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ 176 ಹುದ್ದೆಗಳು ಬಾಕಿ ಇದೆ. ಹುದ್ದೆ ಭರ್ತಿಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ಆದಷ್ಟು ಬೇಗ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದರು.
ಸದಸ್ಯ ಹನುಮಂತ ನಿರಾಣಿ ಕೇಳಿದ ಬೆಳಗಾವಿ ವಿಭಾಗದ ಹುದ್ದೆ ಭರ್ತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಚವ್ಹಾಣ್, 2,176 ಖಾಯಂ, 22 ದಿನಗೂಲಿ, 638 ಹೊರಗುತ್ತಿಗೆ ಆಧಾರದಲ್ಲಿ ಸೇರಿದಂತೆ ಒಟ್ಟು 2,836 ಸಿಬ್ಬಂದಿ ಬೆಳಗಾವಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆ ಭರ್ತಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಾಲು ದರ ಪರಿಷ್ಕರಣೆ ಚರ್ಚೆಗೆ ರೂಲಿಂಗ್:
ಹಾಲು ಉತ್ಪಾದಕ ರೈತರಿಗೆ ನೀಡುತ್ತಿರುವ ಹಾಲಿನ ದರ ಪರಿಷ್ಕರಣೆ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ಕಲ್ಪಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದ ರಾಜು, ರೈತರಿಗೆ ಹಾಲಿನ ಬೆಲೆ ಹೆಚ್ಚಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಹಾಲಿಗೆ 5 ರೂ. ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ರೈತರಿಗೆ ನೀಡುವ ದರದಲ್ಲಿ ಹೆಚ್ಚಳ ಮಾಡಬೇಕು, ಇದನ್ನು ಪರಿಶೀಲಿಸಿ ಎಂದು ಸಭಾಪತಿ ಸೂಚನೆ ನೀಡಿದರು. ಅರ್ಧ ಗಂಟೆ ಚರ್ಚೆಗೆ ಬದಲಾಯಿಸಿ ಮುಂದಿನ ವಾರ ಅವಕಾಶ ಕಲ್ಪಿಸಲಾಗುತ್ತದೆ ಎಂದು ರೂಲಿಂಗ್ ನೀಡಿದರು.