ಬೆಂಗಳೂರು: ವಿಶ್ವಮಾನವ ಸಂದೇಶ ನೀಡಿ ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಶ್ರೇಷ್ಠ ವ್ಯಕ್ತಿ ಡಾ. ಅಂಬೇಡ್ಕರ್ ಅವರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿಂದು ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.
ಸಮಾಜ ಮತ್ತು ದೇಶದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕೊಡುವ ಶ್ರೇಷ್ಠ ಸಂವಿಧಾನವನ್ನು ಅವರು ರಚಿಸಿದ್ದಾರೆ. ಸರ್ವಶ್ರೇಷ್ಠ ಸಂವಿಧಾನ ನಮ್ಮದು. ಅವರ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತದೆ. ನವ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅತ್ಯಮೂಲ್ಯ ಎಂದರು.
ಡಾ. ಅಂಬೇಡ್ಕರ್ ಅವರ ಸಂವಿಧಾನದ ಅಂಶಗಳನ್ನು ಬಿಜೆಪಿ ಮುಂದುವರೆಸಿಕೊಂಡು ಹೋಗಲಿದೆ. ಈ ವಿಚಾರದಲ್ಲಿ ಇತರೆ ಪಕ್ಷಗಳ ಅಪ ಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಅಂಬೇಡ್ಕರ್ರನ್ನು ಒಂದು ಜಾತಿಗೆ ಸೀಮಿತ ಮಾಡಿರುವುದು ದುರಂತ: ಮಂಗಳೂರು ನಗರ ಪೊಲೀಸ್ ಆಯುಕ್ತ
ಪ್ರಪಂಚದ 150 ದೇಶಗಳಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಗುತ್ತದೆ. ಅವರೊಬ್ಬ ಮಹಾನ್ ಸಾಧಕ ಎಂಬುದಕ್ಕೆ ಇದೇ ಸಾಕ್ಷಿ. ಅವರ ಮೇಧಾವಿತನ ನಮಗೆ ಪ್ರೇರಣೆ ಆಗಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.