ಬೆಂಗಳೂರು: ಮನೆಯಲ್ಲಿನ ವಾಸ್ತುದೋಷ ಸರಿಪಡಿಸಲು ಬಂದ ಜ್ಯೋತಿಷಿ ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿವೋರ್ವಳನ್ನು ನಂಬಿಸಿ, ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆರೋಪಿಯನ್ನು ಈಗ ಹನುಮಂತನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ವೆಂಕಟ ಕೃಷ್ಣಾಚಾರ್ಯ (28) ಬಂಧಿತ ಆರೋಪಿ.
ಕಳೆದ ಕೆಲ ವರ್ಷಗಳಿಂದ ಜ್ಯೋತಿಷ್ಯ, ವಾಸ್ತು ಹೆಸರಲ್ಲಿ ಜನರನ್ನ ನಂಬಿಸುತ್ತಿದ್ದನೆನ್ನಲಾದ ಈ ಜ್ಯೋತಿಷಿ, ಇಲ್ಲಿನ ಶ್ರೀನಿವಾಸನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ. ಕಳೆದ ಎರಡು ವರ್ಷಗಳ ಹಿಂದೆ ವಿಜಯನಗರದ ಯುವತಿವೋರ್ವಳ ಮನೆಗೆ ವಾಸ್ತು ನೋಡಲು ತೆರಳಿದ್ದ. ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರೋ ಯುವತಿ ಈತನನ್ನು ನಂಬಿ ತನ್ನ ಅಪಾರ್ಟ್ಮೆಂಟ್ಗೆ ಕರೆದು, ಹಲವು ಬಾರಿ ಮಂತ್ರ ಪಠನೆ ಮಾಡಿಸಿದ್ದಳಂತೆ. ಆಗ ಜ್ಯೋತಿಷಿ ಆ ಮನೆ ವಾಸ್ತು ಸರಿಯಿಲ್ಲ, ವಾಸ್ತುದೋಷ ಇರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಆಗ್ತಿಲ್ಲ ಎಂದು ನಂಬಿಸಿದ್ದನಂತೆ.
ಹೀಗಾಗಿ ಯುವತಿ ಕಳೆದ ಎರಡು ವರ್ಷಗಳಿಂದ ಸುಮಾರು 12 ಬಾರಿ ಮನೆಯಲ್ಲಿ ಯಾಗಗಳನ್ನ ಮಾಡಿಸಿದ್ದಳು. ಈ ವೇಳೆ ಜನ್ಮ ಜನ್ಮದ ಅನುಬಂಧ ಎಂದು ನಂಬಿಸಿ ನಂತರ ಆಕೆಯ ನಂಬರ್ ಪಡೆದಿದ್ದನಂತೆ. ಈಗಾಗಲೇ ಮದುವೆಯಾಗಿ ಒಂದು ಮಗುವಿರೋ ವಿಚಾರವನ್ನು ಮರೆಮಾಚಿ ಯುವತಿ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದನಂತೆ.
ಕಳೆದ ಮೂರು ಜನ್ಮದಿಂದ ನಾವಿಬ್ಬರೂ ಗಂಡ-ಹೆಂಡತಿ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನನ್ನ ಮದುವೆಯಾದಾಗ ಮಾತ್ರ ನಿನಗೆ ಮೋಕ್ಷ ಸಾಧ್ಯ ಅಂತ ಯುವತಿಯನ್ನ ನಂಬಿಸಿದ್ದನಂತೆ. ಇದನ್ನು ನಂಬಿದ ಯುವತಿಯು ಜ್ಯೋತಿಷಿ ಹೇಳಿದ ಹಾಗೆ ಬ್ಯಾಗ್ನಲ್ಲಿ ನಿಂಬೆಹಣ್ಣು, ತಾಯತ, ಹೆಣ್ಣಿನ ಗೊಂಬೆ, ಕರ್ಪೂರ ಇಟ್ಟುಕೊಂಡು ಕಚೇರಿಗೆ ತೆರಳುತ್ತಿದ್ದಳು ಎನ್ನಲಾಗ್ತಿದೆ.
ಜ್ಯೋತಿಷಿಯನ್ನು ಅತಿಯಾಗಿ ನಂಬಿದ್ದ ಯುವತಿಯು ಆತ ಕೇಳಿದಾಗಲೆಲ್ಲ, ಲಕ್ಷ ಲಕ್ಷ ಹಣ ನೀಡಿದ್ದಳಂತೆ. ಅಷ್ಟು ಮಾತ್ರವಲ್ಲದೆ ಬ್ಯಾಂಕ್ಗಳಿಂದ ತನ್ನ ಹೆಸರಲ್ಲಿ 30 ಲಕ್ಷಕ್ಕೂ ಹೆಚ್ಚು ಸಾಲ ಕೊಡಿಸಿದ್ದಳಂತೆ. ಬರ ಬರುತ್ತಾ ಜ್ಯೋತಿಷಿ ಮೋಸ ಮಾಡಿರುವ ವಿಚಾರ ತಿಳಿದು ಹಣ ವಾಪಸ್ ಕೇಳಿದ್ದಳು. ಆದ್ರೆ ಈ ಜ್ಯೋತಿಷಿ ಯುವತಿಗೆ ಬೆದರಿಸಿ ನೀನು ಕಂಪ್ಲೇಂಟ್ ಕೊಟ್ರೆ ಕೈಕಾಲು ಮುರಿಸ್ತೇನೆ ಅಂತಾ ಬೆದರಿಸಿದ್ದ ಎಂದು ದೂರಲಾಗಿದೆ.
ಇನ್ನು ಯುವತಿ ಒಬ್ಬಳೇ ಮಗಳಾದ ಕಾರಣ ಮಗಳ ಪರಿಸ್ಥಿತಿಯನ್ನು ಕಂಡು ಪೋಷಕರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.