ಬೆಂಗಳೂರು: 90 ಮೀಟರ್ ಎತ್ತರದ ಅಗ್ನಿಶಾಮಕ ಏರಿಯಲ್ ಲ್ಯಾಡರ್ ಅನ್ನು ಸಿಎಂ ಬೊಮ್ಮಾಯಿ ಇಂದು ಲೋಕಾರ್ಪಣೆ ಮಾಡಿದ್ದಾರೆ.
ವಿಧಾನಸೌಧದ ಮುಂದೆ ಏರಿಯಲ್ ಲ್ಯಾಡರ್‌ನ ರಕ್ಷಣಾ ತೊಟ್ಟಿಲಿನ ಮೇಲೆ ನಿಂತು ಸಿಎಂ ಪರಿವೀಕ್ಷಣೆ ಮಾಡಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಇದ್ದರು.
ಬಳಿಕ ಮಾತನಾಡಿದ ಸಿಎಂ, ಬೆಂಗಳೂರು ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆ ನೀಡಿದ ದಿನ. ನಗರಕ್ಕೆ 90 ಮೀಟರ್ ಏರಿಯಲ್ ಲ್ಯಾಡರ್ ಅವಶ್ಯಕತೆ ಇದೆ. ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಈವರೆಗೆ 50 ಮೀಟರ್ ಏರಿಯಲ್ ಲ್ಯಾಡರ್ ಇತ್ತು. ಮುಂಬೈ ನಗರದಲ್ಲಿ 90 ಮೀಟರ್ ಲ್ಯಾಡರ್ ಇತ್ತು. ಈಗ ಅಲ್ಲಿ ಬಿಟ್ಟರೆ ಬೆಂಗಳೂರಲ್ಲಿ ಮಾತ್ರ ಇಷ್ಟು ಎತ್ತರದ ಏರಿಯಲ್ ಲ್ಯಾಡರ್ ಇದೆ ಎಂದು ಹೇಳಿದರು. ಎರಡೂವರೆ ವರ್ಷದಿಂದ ಇದನ್ನು ಬೆಂಗಳೂರಿಗೆ ತರಿಸಲು ಯತ್ನಿಸಿದ್ದೇವೆ. ಕೋವಿಡ್, ತಾಂತ್ರಿಕ ಕಾರಣದಿಂದ ತಡವಾಗಿದೆ ಎಂದು ತಿಳಿಸಿದರು.
ಏರಿಯಲ್ ಲ್ಯಾಡರ್‌ನ ವಿಶೇಷತೆ: ಕರ್ನಾಟಕ ರಾಜ್ಯದ ಪ್ರಮುಖ ನಗರಗಳು, ವಿಶೇಷವಾಗಿ ಬೆಂಗಳೂರು ನಗರ ವರ್ಟಿಕಲ್ ಬೆಳವಣಿಗೆ ಕಾಣುತ್ತಿದೆ. ಇದರಿಂದಾಗಿ 30 ಅಂತಸ್ತುಗಳಿಗಿಂತ ಹೆಚ್ಚಿರುವ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಕರ್ನಾಟಕ ಸರ್ಕಾರ ಈಗಾಗಲೇ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ 32 ಮೀಟರ್ ಮತ್ತು 54 ಮೀಟರ್‌ಗಳ ನಾಲ್ಕು ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್‌ಗಳನ್ನು ಖರೀದಿಸಿದೆ.
ಬಹುಮಹಡಿ ಕಟ್ಟಡಗಳಲ್ಲಿ ಆಂತರಿಕ ಅಗ್ನಿಶಾಮಕ ವ್ಯವಸ್ಥೆಗಳು ಜಾರಿಯಲ್ಲಿದ್ದರೂ, ಆಕಸ್ಮಿಕ ಬೆಂಕಿಯಾದ ಸಂದರ್ಭದಲ್ಲಿ ಅಗ್ನಿಶಮನ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕಟ್ಟಡದ ಹೊರಗಿನಿಂದ ಮಾಡಬೇಕಾಗುತ್ತದೆ. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ 90 ಮೀಟರ್ ಎತ್ತರ ಮತ್ತು 30 ಅಂತಸ್ತುಗಳವರೆಗೆ ತಲುಪಿ ಅಗ್ನಿ ನಂದಿಸಿ ಮತ್ತು ಸಾರ್ವಜನಿಕರನ್ನು ರಕ್ಷಿಸುವ ಸಾಮರ್ಥ್ಯವುಳ್ಳ 90 ಮೀಟರ್‌ಗಳ ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್ ಅನ್ನು ಖರೀದಿಸಲಾಗಿದೆ. ಈ ಲ್ಯಾಡರನ್ನು 31.19 ಕೋಟಿ ರೂ ವೆಚ್ಚದಲ್ಲಿ ಫಿನ್‌ಲ್ಯಾಂಡ್‌ನ 'ಬೊಂಟೊ ಕಂಪನಿಯಿಂದ ಖರೀದಿಸಿ ಆಮದು ಮಾಡಿಕೊಳ್ಳಲಾಗಿದೆ.
ಬೆಂಗಳೂರು ಬಗ್ಗೆ ಹಲವು ವ್ಯಾಖ್ಯಾನ ಸರಿಯಲ್ಲ: ಬೆಂಗಳೂರು ಬಗ್ಗೆ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಇದು ಸರಿಯಲ್ಲ. ಮೊನ್ನೆ ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹ ಬಂದಿತ್ತು. ಉಳಿದ 26 ಕ್ಷೇತ್ರದಲ್ಲಿ ಪ್ರವಾಹ ಬಂದಿರಲಿಲ್ಲ. ಆದರೆ ಇಡೀ ಬೆಂಗಳೂರು ನಗರ ಮುಳುಗಿ ಹೋಗಿದೆ ಎಂದು ಬಿಂಬಿಸಿದ್ದರು ಎಂದು ಹೇಳಿದರು.
ಬೆಂಗಳೂರು ನಮ್ಮ ದೇಶಕ್ಕೆ ಮುಖ್ಯ, ಅಂತಾರಾಷ್ಟ್ರೀಯವಾಗಿ ಬಹಳ ಮುಖ್ಯ ನಗರವಾಗಿದೆ. ಹಾಗಾಗಿ ಬೆಂಗಳೂರನ್ನು ಸರಿಯಾಗಿ ಬಿಂಬಿಸುವುದು ಅಗತ್ಯ. ನಿತ್ಯ ಬೆಂಗಳೂರಿನಲ್ಲಿ 5000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಆದರೆ, ನಮ್ಮ ರಸ್ತೆ ಅಷ್ಟೇ ಇದೆ. ಆದರೂ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದಾರೆ. ನಗರದಾದ್ಯಂತ ವಿಶೇಷ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ ಎಂದರು.
ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಸೂಚನೆ: ಸಮರೋಪಾದಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಅನೇಕ ಪಾಟ್ ಹೋಲ್ ಮುಚ್ಚಿದ್ದೆವು. ಮತ್ತೆ ಮಳೆ ಬಂದ ಕಾರಣ ಮತ್ತೆ ರಸ್ತೆ ಗುಂಡಿಗಳಾಗಿವೆ. ಇದನ್ನೂ ಮುಚ್ಚಲು ಆದೇಶ ನೀಡಲಾಗಿದೆ. ಮಳೆ ಬಂದ ಕಾರಣ ಕಾಮಗಾರಿಗೆ ಹಿನ್ನೆಡೆಯಾಗಿದೆ ಎಂದರು.
ಇದನ್ನೂ ಓದಿ: 'ರಾಮಮಂದಿರ ಸ್ಫೋಟಿಸುವ PFI ಸಂಚಿನಿಂದ ರಾಷ್ಟ್ರಭಕ್ತ ಹಿಂದೂಗಳಿಗೆ ಆಘಾತ'