ಬೆಂಗಳೂರು: ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗಕ್ಕೆ ದತ್ತು ಮಕ್ಕಳು ಅರ್ಹರು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಲ್ಲಿ ಸ್ವಂತ ಮಕ್ಕಳು ಮತ್ತು ದತ್ತು ಮಕ್ಕಳು ಎಂಬುದಾಗಿ ತಾರತಮ್ಯ ಮಾಡಿದರೆ ದತ್ತು ಸ್ವೀಕಾರದ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದೆ.
ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ಲಭ್ಯವಾಗುವುದಿಲ್ಲ ಎಂದು ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗಿರೀಶ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ವಿಭಾಗಿಯ ಪೀಠ, ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ದತ್ತು ಮಕ್ಕಳು ಮತ್ತು ಸ್ವಂತ ಮಕ್ಕಳು ಎಂಬ ವ್ಯತ್ಯಾಸವನ್ನು ನೋಡಿದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರ್ಕಾರ ದತ್ತು ಮಕ್ಕಳು ಮತ್ತು ಸ್ವಂತ ಮಕ್ಕಳ ನಡುವಿನ ವ್ಯತ್ಯಾಸವನ್ನು 2021ರ ಏಪ್ರಿಲ್ ತಿಂಗಳಲ್ಲಿ ತೆಗೆದು ಹಾಕಿದೆ. ಈ ಬಗ್ಗೆ ಹೊಸದಾಗಿ ತಿದ್ದು ಪಡಿ ಮಾಡಲಾಗಿದೆ. ಈ ಅಂಶ ಏಕ ಸದಸ್ಯ ಪೀಠ ಗಮನಿಸಿಲ್ಲ ಎಂಬುದಾಗಿ ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸರ್ಕಾರದ ಪರ ವಕೀಲರು, 2021ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಆದರೆ ಗಿರೀಶ್ ಅವರು 2018ರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಈ ನಿಯಮದ ಲಾಭ ಪಡೆಯಲು ಅವಕಾಶವಿಲ್ಲ ಎಂದು ವಿವರಿಸಿದರು.
ಸರ್ಕಾರದ ವಾದ ತಳ್ಳಿ ಹಾಕಿದ ನ್ಯಾಯಪೀಠ, ಸೇವೆಯಲ್ಲಿರುವ ವ್ಯಕ್ತಿ ಮೃತಪಟ್ಟಾಗ ಆತನ ಕುಟುಂಬ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಆಧಾರದಲ್ಲಿ ಅನುಕಂಪದ ನೇಮಕಾತಿ ಇರಲಿದೆ. ಜತೆಗೆ, ಈ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಹೆಂಡತಿ ಮತ್ತು ಮಗ ಮತ್ತು ಬುದ್ಧಿಮಾಂದ್ಯ ಹಾಗೂ ದೈಹಿಕ ವಿಕಲಾಂಗ ಮಗಳನ್ನು ಬಿಟ್ಟು ಹೋಗಿದ್ದಾರೆ. ಮಗ ಈಗಾಗಲೇ ಮೃತ ಪಟ್ಟಿದ್ದು, ಮೃತರ ಮಗಳು ಅಂಗವೈಕಲ್ಯಕ್ಕೆ ಒಳಗಾಗಿದ್ದು, ಮಾನಸಿಕವಾಗಿ ಬುದ್ಧಿಮಾಂಧ್ಯರಾಗಿದ್ದಾರೆ.
ಆದ್ದರಿಂದ ಕುಟುಂಬದ ಪೋಷಣೆ ಮಾಡಬೇಕಾಗಿದ್ದು, ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೇ, ಅನುಕಂಪದ ಆಧಾರದಲ್ಲಿ ಅರ್ಜಿ ಸಲ್ಲಿಸಿರುವವರು ಆ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟು, ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ ನೀಡುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಬನಹಟ್ಟಿಯ ಜೆಎಂಎಫ್ಸಿ ನ್ಯಾಯಾಲಯದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ವಿನಾಯಕ ಎಂ ಮುತ್ತಟ್ಟಿ ಎಂಬುವರು ದಲಾಯತ್(ಗ್ರೂಪ್ ಡಿ ನೌಕರ)ಆಗಿ ಸೇವೆ ಸಲ್ಲಿಸುತ್ತಿದ್ದು, ಮುತ್ತಟ್ಟಿ 2011ರಲ್ಲಿ ಗಿರೀಶ್ ಅವರನ್ನು ದತ್ತು ಪಡಿದುಕೊಂಡಿದ್ದರು. ಅಲ್ಲದೇ, ದತ್ತು ಸ್ವೀಕಾರ ಪತ್ರವನ್ನು ಬರೆಸಿದ್ದರು. ಆದರೆ, ಕಾರಣಾಂತರಗಳಿಂದ 2018ರಲ್ಲಿ ನಿಧನರಾಗಿದ್ದರು.
ಅವರ ಹುದ್ದೆಯನ್ನು ಅನುಕಂಪದ ಆಧಾರದಲ್ಲಿ ನೀಡುವಂತೆ ಕೋರಿ ಅವರ ದತ್ತುಪುತ್ರ ಗಿರೀಶ್ ಪ್ರಾಸಿಕ್ಯೂಷನ್ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಇಲಾಖೆ, ದತ್ತು ಪುತ್ರನಿಗೆ ಅನುಕಂಪದಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಪೀಠ ಅರ್ಜಿ ವಜಾಗೊಳಿಸಿ ಪ್ರಾಸಿಕ್ಯೂಷನ್ ಇಲಾಖೆಯ ಆದೇಶನ್ನು ಎತ್ತು ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಅನುಕಂಪದ ನೌಕರಿ ನಿಯಮಗಳನ್ನು ಪರಿಷ್ಕರಿಸಿದ ಸರ್ಕಾರ : ಯಾರೆಲ್ಲ ಅರ್ಹರು ಸಂಪೂರ್ಣ ಮಾಹಿತಿ ಇಲ್ಲಿದೆ