ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್ ಸೆ. 19 ಕ್ಕೆ ಮುಂದೂಡಿದೆ.
ಇಂದು ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯದ ಎನ್ಡಿಪಿಎಸ್ ವಿಶೇಷ ವಿಭಾಗವು ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಹೀಗಾಗಿ, ಸದ್ಯಕ್ಕೆ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ಇಂದು ಜಾಮೀನು ಅರ್ಜಿ ವಿಚಾರಣೆಗೆ ಬಂದು, ತನಗೆ ಜಾಮೀನು ಸಿಗಬಹುದು ಎಂಬ ನೀರಿಕ್ಷೆಯಲ್ಲಿ ಸಂಜನಾ ಇದ್ದರು. ಆದರೆ, ಸಿಸಿಬಿ ಪೊಲೀಸರು ಇನ್ನಷ್ಟು ತನಿಖೆ ನಡೆಸಿರುವ ಕಾರಣ, ನ್ಯಾಯಾಲಕ್ಕೆ ಅದರ ವರದಿ ಸಲ್ಲಿಸಬೇಕಾಗಿದೆ. ಈಗಾಗಲೇ ವರದಿ ಸಿದ್ಧ ಮಾಡಿಕೊಂಡಿರುವ ಸಿಸಿಬಿ, ನಾಳೆ ಸಂಜನಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲಿದೆ. ಆಕ್ಷೇಪಣೆಯಲ್ಲಿ ಸಂಜನಾ ಡ್ರಗ್ಸ್ ಜಾಲ ನಂಟಿನ ಕುರಿತು ಸಿಸಿಬಿ ಅಧಿಕಾರಿಗಳು ಉಲ್ಲೇಖ ಮಾಡಲಿದ್ದಾರೆ. ನಾಳೆ ಇದೇ ನ್ಯಾಯಾಲಯದಲ್ಲಿ ನಟಿ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ. ಸದ್ಯ, ಇಬ್ಬರು ನಟಿ ಮಣಿಯರು ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಗಳಾಗಿದ್ದು, ನಾಳೆ ಮತ್ತೆ ತಮ್ಮ ಭವಿಷ್ಯ ಏನಾಗುತ್ತೋ ಎಂಬ ಚಿಂತೆಯಲ್ಲಿದ್ದಾರೆ.