ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದಡಿ ನಟಿ ರಾಗಿಣಿ ದ್ವಿವೇದಿಗೆ ಜಾರಿ ನಿರ್ದೇಶನಾಲಯದಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಡ್ರಗ್ ವ್ಯವಹಾರಗಳಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಸಾಧ್ಯತೆ ಬಗ್ಗೆ ಇ.ಡಿ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಡ್ರಗ್ ವ್ಯವಹಾರದ ಹಣದಿಂದ ಹಲವು ಉದ್ಯಮಗಳಲ್ಲಿ ಬೇನಾಮಿ ಹಣ ಹೂಡಿರುವ ಆರೋಪ ಕೇಳಿ ಬಂದಿದೆ. 2009ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಾಗಿಣಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದರು.
ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ನಟಿಸಿದ್ದರು. ಕೆಲ ಜಾಹೀರಾತು ಹಾಗೂ ಕೆಪಿಎಲ್ನ ತಂಡವೊಂದರಲ್ಲಿ ಷೇರು ಹೊಂದಿರುವ ಆರೋಪವಿದೆ. ಕೆಲವೇ ವರ್ಷಗಳಲ್ಲಿ ಸ್ವಂತ ಮನೆ ಹಾಗೂ ಆಸ್ತಿ ಹೊಂದಿದ್ದಾರೆ. ಇವೆಲ್ಲಾ ವ್ಯವಹಾರಗಳ ಮೇಲೆ ನಿಗಾ ವಹಿಸಿರುವ ಇ.ಡಿ. ತನಿಖೆ ನಡೆಸುವ ಸಾಧ್ಯತೆಯಿದೆ.
ಮಹಿಳಾ ಮತ್ತು ಮಕ್ಕಳ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಯನ್ನು ಭೇಟಿಯಾಗಲು ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಬರುವ ಭೀತಿಯಿಂದ ಪೊಲೀಸ್ ಭದ್ರತೆ ನೀಡಲಾಗಿದೆ. ರಾಗಿಣಿ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಯಿಂದ ಜಾರಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.