ಬೆಂಗಳೂರು: ತಮ್ಮ ಆಧಾರ್ ಕಾರ್ಡ್ ದುರ್ಬಳಕೆ ಮಾಡಿ ಸೈಬರ್ ಖದೀಮರು ಸಿಮ್ ಕಾರ್ಡ್ ಖರೀದಿಸಿದ್ದಾರೆ ಎಂದು ನಟಿ ಮಾಳವಿಕ ಅವಿನಾಶ್ ಕಿಡಿಕಾರಿದ್ದಾರೆ. ಆಧಾರ್ ಕಾರ್ಡ್ ಮಾಹಿತಿ ಆಧರಿಸಿ ಆರೋಪಿಗಳು ಸಿಮ್ ಖರೀದಿಸಿ ಮುಂಬೈನಲ್ಲಿ ಕೆಲವರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದರು. ಈ ಬಗ್ಗೆ ಅಲ್ಲಿನ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಮಾಳವಿಕ ಅವರ ಆಧಾರ್ ಕಾರ್ಡ್ ಬಳಸಿರುವುದು ಗೊತ್ತಾಗಿದೆ. ಮಾಹಿತಿ ಆಧರಿಸಿ ಕರೆ ಮಾಡಿ ಪ್ರಶ್ನಿಸಿದ್ದರು. ಅಲ್ಲದೇ ಮುಂಬೈಗೆ ಬಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಈ ವೇಳೆ ವಿಡಿಯೋ ಕಾಲ್ ಮಾಡಿದಾಗ ಚಿತ್ರನಟಿ ಎಂದು ಪೊಲೀಸರು ಗುರುತಿಸಿದ್ದಾರೆ. ಈ ಬಗ್ಗೆ ದೂರು ನೀಡುವಂತೆಯೂ ಸೂಚಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮಾಳವಿಕ ಮುಂಬೈ ಪೊಲೀಸರು ಕರೆ ಮಾಡಿ ಪ್ರಕರಣವೊಂದರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆಧಾರ್ ಕಾರ್ಡ್ ದುರ್ಬಳಕೆಯಾಗಿರುವ ಬಗ್ಗೆ ಗೊತ್ತಾಗಿದೆ. ತನ್ನ ಆಧಾರ್ ಕಾರ್ಡ್ ಬಳಸಿ ಅಪರಿಚಿತರು ಸಿಮ್ ಕಾರ್ಡ್ ಖರೀದಿಸಿ ಹಲವರಿಗೆ ಸಂದೇಶ ಕಳುಹಿಸುತ್ತಿದ್ದಾರೆ. ನಾನು ಎಲ್ಲಿಯೂ ಸಹ ಆಧಾರ್ ಕಾರ್ಡ್ ಆಗಲಿ ಇನ್ನಿತರ ಮಾಹಿತಿಯನ್ನಾಗಲಿ ನೀಡಿಲ್ಲ. ಮುಂಬೈಗೆ ಹಲವು ಬಾರಿ ಹೋಗಿ ಬಂದಿದ್ದೇನೆ. ಹೇಗೆ ನನ್ನ ಆಧಾರ್ ಕಾರ್ಡ್ ನಂಬರ್ ಸೋರಿಕೆಯಾಯಿತು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಆಧಾರ್ ಮತ್ತು ವೋಟರ್ ಐಡಿ ನಕಲು : ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಮೌನೇಶ್ ಕುಮಾರ್, ಭಗತ್ ಹಾಗೂ ರಾಘವೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಮೌನೇಶ್ ಕುಮಾರ್, ಹೆಬ್ಬಾಳ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ಎಂಎಸ್ಎಲ್ ಟೆಕ್ನೋ ಸೊಲ್ಯೂಶನ್ ಎಂಬ ಕಚೇರಿ ನಡೆಸುತ್ತಿದ್ದ. ಇದೇ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಈ ಹಿಂದೆ ಕೂಡ ಇಂತಹದ್ದೇ ಘಟನೆ ನಡೆದಿತ್ತು. ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ ಪೊಲೀಸರು ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಬಂಧಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಆಧಾರ್ ಸಂಖ್ಯೆ, ಬೆರಳಚ್ಚು ಸಂಗ್ರಹಿಸಿ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದ ಇಬ್ಬರು ವಂಚಕರು ಸೆರೆ