ಬೆಂಗಳೂರು: ನಗರದಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಭಕ್ತರು ದಾನದ ರೂಪದಲ್ಲಿ ನೀಡಿರುವ ಆಹಾರ ಧ್ಯಾನಗಳನ್ನು ಬಡವರಿಗೆ ವಿತರಿಸಲು ಬೆಂಗಳೂರು ಜಿಲ್ಲಾಡಳಿತ ನಿರ್ಧರಿಸಿದೆ.
ನಗರದ ಐತಿಹಾಸಿಕ ದೇವಸ್ಥಾನವಾಗಿರುವ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಂಜುನಾಥ್, ದೇವಸ್ಥಾನದ ದಾಸ್ತಾನಿನಲ್ಲಿರುವ ಆಹಾರ ಧ್ಯಾನಗಳನ್ನು ಕಂಡು ರೇಷನ್ ಕಿಟ್ಗಳಾಗಿ ಪರಿವರ್ತಿಸಿ ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿಯು ದಾಸ್ತಾನು ಕೊಠಡಿಯಲ್ಲಿದ್ದ 15,500 ಕೆಜಿ ಅಕ್ಕಿ, 1,292 ಕೆಜಿ ಬೆಲ್ಲ, 200 ಕೆಜಿ ಸಕ್ಕರೆ, ತೊಗರಿ ಬೇಳೆ ಹಾಗೂ ಅಡುಗೆ ಎಣ್ಣೆಯನ್ನು ರೇಷನ್ ಕಿಟ್ಗಳಾಗಿ ಪರಿವರ್ತಿಸಲಾಗುತ್ತಿದೆ. ಕಿಟ್ನಲ್ಲಿ ಒಬ್ಬರಿಗೆ 10 ಕೆಜಿ ಅಕ್ಕಿ, ಒಂದು ಕೆಜಿ ಬೆಲ್ಲ, ಲಭ್ಯತೆ ಅನುಗುಣವಾಗಿ ಬೇಳೆ, ಸಕ್ಕರೆ ನೀಡಲಾಗುತ್ತಿದೆ.
ಸದ್ಯ 500 ಮಂದಿಗೆ ಕಿಟ್ ನೀಡಲಾಗುವುದು. ಅನೇಕಲ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿರುವ ಹಕ್ಕಿಪಿಕ್ಕಿ ಹಾಗೂ ಗುಲ್ಬರ್ಗ ಕಾಲೋನಿ ಸೇರಿದಂತೆ ವಿವಿಧ ಕಡೆ ವಾಸವಾಗಿರುವ ಕಾರ್ಮಿಕರಿಗೆ ಇನ್ನೆರಡು ದಿನಗಳಲ್ಲಿ ರೇಷನ್ ಕಿಟ್ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಂಜುನಾಥ್ ಈಟಿವಿ ಭಾರತಗೆಕ್ಕೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಚಂಪಕಧಾಮ ದೇವಾಲಯ ಸೇರಿದಂತೆ ಮುಜರಾಯಿಗೆ ಒಳಪಡುವ ದೇವಾಲಯಗಳಲ್ಲಿರುವ ಆಹಾರ ಧ್ಯಾನಗಳನ್ನು ಬಡವರಿಗೆ ನೀಡುವ ಹಾಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.