ಬೆಂಗಳೂರು : ಕೆಲವು ಶಾಸಕರು ರಾಜೀನಾಮೆ ನೀಡುವ ಮುನ್ನವೇ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿವೆ. ತ್ವರಿತವಾಗಿ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಸರಿಯಾದ ಕ್ರಮವಲ್ಲ. ವಿಚಾರಣಾ ಪ್ರಕ್ರಿಯೆಗಳನ್ನು ಮಧ್ಯರಾತ್ರಿಯಲ್ಲೇ ಮುಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ರು.
ಅತೃಪ್ತ ಶಾಸಕರ ರಾಜೀನಾಮೆ ಏಕೆ ಅಂಗೀಕರಿಸುತ್ತಿಲ್ಲ? ಎಂದು ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, ಸಂವಿಧಾನದ ಕಲಂ 190ರ ಪ್ರಕಾರ ವಿಚಾರಣೆ ನಡೆಯುತ್ತಿದೆ. ರಾಜೀನಾಮೆ ಅಂಗೀಕಾರಕ್ಕೆ ಆತುರವಿಲ್ಲ ಎಂದರು.
ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಸ್ಪೀಕರ್ ಆರಂಭಿಸಿದ್ದಾರೆ. ಅತೃಪ್ತ ಶಾಸಕರ ಪರ ವಾದಿಸುತ್ತಿರುವ ವಕೀಲ ಮುಕುಲ್ ರೋಹ್ಟಗಿ ನ್ಯಾಯಾಲಯ ಮತ್ತು ವಿಚಾರಣೆಯ ಹಾದಿ ತಪ್ಪಿಸುತ್ತಿದ್ದಾರೆ. ತ್ವರಿತ ಅಂಗೀಕಾರ ಕ್ರಮವಲ್ಲ. ಕ್ರಮಬದ್ಧತೆ ಅನುಸರಿಸುವುದು ನಿಯಮ. ಅದನ್ನೇ ಸ್ಪೀಕರ್ ರಮೇಶ್ ಕುಮಾರ್ ಮಾಡುತ್ತಿದ್ದಾರೆ. ರಾಜೀನಾಮೆಯ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕವೂ ಸ್ಪೀಕರ್ ಏಕೆ ಕ್ರಮ ಜರುಗಿಸಿಲ್ಲ? ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ, ಮನುಸಿಂಘ್ವಿ, ತಮ್ಮ ಇಷ್ಟದ ಪ್ರಕಾರ ತೀರ್ಮಾನ ಅನ್ನುವುದು ಸರಿಯಲ್ಲ. ಶಾಸಕರು ಸ್ಪೀಕರ್ ಬಳಿ ಸಮಯವನ್ನೇ ಕೇಳಿರಲಿಲ್ಲ. ಹಾಗಾಗಿ ಅನರ್ಹತೆ ಅರ್ಜಿ ಮೊದಲು ಪರಿಗಣನೆಯಾಗಲಿ ಎಂದಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ಅವರನ್ನು ತಡೆಯುತ್ತಿರುವುದು ಯಾರು? ಸರಕಾರ ಏನಾದ್ರೂ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದೆಯೇ ಎಂದು ಸಿಜೆಐ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿಂಘ್ವಿ, ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ. 24 ಗಂಟೆಯೊಳಗೆ ರಾಜೀನಾಮೆ ಅಂಗೀಕರಿಸಿ ಅನರ್ಹತೆ ಬಗ್ಗೆ ಯಾಕೆ ತೀರ್ಮಾನಿಸಿಲ್ಲ ಎಂದು ಕೋರ್ಟ್ ಮರು ಪ್ರಶ್ನೆ ಹಾಕಿದೆ. ನಾಳೆ ಒಳಗೆ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದು ಸಿಂಘ್ವಿ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.