ಬೆಂಗಳೂರು : ಪ್ರೀತಿ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತನನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿ ಬಳಿಕ ಕಟ್ಟಡದಿಂದ ತಳ್ಳಿ ಸಹಜ ಸಾವು ಎಂದು ಬಿಂಬಿಸಲು ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಸ್ಸಾಂ ಮೂಲದ ಗೌತಮ್ ತಟಿ (26) ಎಂದು ಗುರುತಿಸಲಾಗಿದ್ದು, ಸನು ಉರಂಗ್ ಮೃತ ದುರ್ದೈವಿಯಾಗಿದ್ದಾನೆ.
ಅಸ್ಸೋಂ ಮೂಲದವರಾದ ಇಬ್ಬರು ಸ್ನೇಹಿತರು ಕಳೆದ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹುಳಿಮಾವಿನಲ್ಲಿ ಒಂದೇ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಮೃತ ಸನು ಉರಂಗ್ ಅರಕೆರೆ ಬಳಿ ಇರುವ ಗುರು ಗಾರ್ಡನ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು, ಗೌತಮ್ ಅದೇ ಏರಿಯಾದಲ್ಲಿದ್ದ ಬೇರೊಂದು ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ. ಈ ಗೆಳೆಯರಿಬ್ಬರು ಊರಿನಲ್ಲಿ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಮಾತ್ರವಲ್ಲದೆ ಜಗಳವೂ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಮದ್ಯ ಸೇವಿಸಿ ಇಬ್ಬರು ಮನೆಯಲ್ಲಿರುವಾಗ ತಾವು ಪ್ರೀತಿಸುತ್ತಿದ್ದ ಹುಡುಗಿಯ ವಿಷಯ ಪ್ರಸ್ತಾಪವಾಗಿದೆ. ಇದರಿಂದಾಗಿ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ನಶೆಯಲ್ಲಿದ್ದ ಗೌತಮ್, ಸನುವಿನ ಕುತ್ತಿಗೆಯನ್ನು ಬಿಗಿದಿದ್ದಾನೆ. ಈ ವೇಳೆ ಉಸಿರುಗಟ್ಟಿ ಸನು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇದರಿಂದ ಆತಂಕಗೊಂಡ ಆರೋಪಿ ಗೌತಮ್ ಮಧ್ಯರಾತ್ರಿ 2 ಗಂಟೆವರೆಗೂ ಕಾದು ಬಳಿಕ ಯಾರು ಇಲ್ಲದ ಸಮಯ ನೋಡಿ ತನ್ನ ಮನೆಯ ಎರಡನೇ ಮಹಡಿಯಿಂದ ಸನುವಿನ ಮೃತದೇಹವನ್ನು ಕೆಳಗೆ ತಳ್ಳಿದ್ದಾನೆ. ಈ ಮೂಲಕ ಕೊಲೆ ಕೃತ್ಯವನ್ನು ಮಾರೆಮಾಚಲು ಕುಡಿದ ನಶೆಯಲ್ಲಿ ಮನೆಯ ಮೇಲಿಂದ ಬಿದ್ದು ಸಾವವನ್ನಪ್ಪಿದ್ದಾನೆ ಎಂದು ಬಿಂಬಿಸಲು ಆರೋಪಿ ಮುಂದಾಗಿದ್ದನು.
ಇಂದು ಬೆಳಗ್ಗೆ ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಸಬ್ ಇನ್‌ಸ್ಪೆಕ್ಟರ್ ಪ್ರಭುಗೌಡ ನೇತೃತ್ವದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೊದಲು ಆಕಸ್ಮಿಕ ಸಾವು ಎಂದು ಭಾವಿಸಿದ್ದ ಪೊಲೀಸರು, ಮೃತದೇಹವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆ ಅನುಮಾನಗೊಂಡ ಪೊಲೀಸರು ಎಫ್ಎಸ್ಎಲ್ ತಂಡವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಆರೋಪಿ ಗೌತಮ್‌ನನ್ನು ವಿಚಾರಣೆ ನಡೆಸಿದಾಗ ತನ್ನ ಗೆಳೆಯನನ್ನು ಹತ್ಯೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗೌತಮ್ ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತನ ಪೋಷಕರಿಗೆ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಐವರು ನೀರು ಪಾಲು