ಬೆಂಗಳೂರು: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಲಾಕೌಡೌನ್ ಹೇರಿರುವುದು ಗೊತ್ತಿರುವ ವಿಚಾರ. ಆದ್ರೆ ಈ ಸಂಧರ್ಭದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಸದ್ಯ ಕೌಟುಂಬಿಕ ಕಲಹಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಸಾವಿತ್ರಿ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಮೂಲತಃ ನಾಗಮಂಗಲ ನಿವಾಸಿಗಳಾಗಿದ್ದ ದಂಪತಿ ಲಗ್ಗೆರೆಯಲ್ಲಿ ವಾಸವಾಗಿದ್ದರು. ಲಾಕ್ಡೌನ್ ಹಿನ್ನೆಲೆ ದಂಪತಿ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು ಎನ್ನಲಾಗ್ತಿದೆ.
ನಿನ್ನೆ ರಾತ್ರಿ ಸಹ ಗಂಡ- ಹೆಂಡತಿ ಮಧ್ಯೆ ಜಗಳವಾಗಿದೆ. ಹೀಗಾಗಿ ಮನನೊಂದ ಪತ್ನಿ ಸಾವಿತ್ರಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.
ಪ್ರಾಥಮಿಕ ತನಿಖೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ಪರಾರಿಯಾಗಿರುವ ಪತಿರಾಯನ ಬಂಧನಕ್ಕೆ ಶೋಧ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಮತ್ತೊಂದೆಡೆ ಗಂಡ-ಹೆಂಡತಿ ಜಗಳದ ನಡುವೆ ಎರಡು ವರ್ಷದ ಕಂದಮ್ಮ ಮಾತ್ರ ಅನಾಥವಾಗಿದೆ.