ಬೆಂಗಳೂರು : ಮದ್ಯದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಸಾರ್ವಭೌಮ ನಗರದಲ್ಲಿ ತಡರಾತ್ರಿ ನಡೆದಿದೆ. ಗಣೇಶ್ ನಾಯ್ಕ್ (45) ಎಂಬಾತನನ್ನ ಹತ್ಯೆಗೈದು, ನಾರಾಯಣ ಎಂಬ ಆರೋಪಿ ಪರಾರಿಯಾಗಿದ್ದಾನೆ.
'ಆರೋಪಿ ನಾರಾಯಣನ ತಮ್ಮ ಮಲ್ಲೇಶ್ ಒಡೆತನದ ಮನೆಯಲ್ಲಿ ಗಣೇಶ್ ನಾಯ್ಕ್ ವಾಸವಿದ್ದ. ತಡರಾತ್ರಿ ಮದ್ಯಪಾನ ಮಾಡಿಕೊಂಡು ಮಲ್ಲೇಶನ ಮನೆಯ ಬಳಿ ಬಂದಿದ್ದ ನಾರಾಯಣ, 'ನಾನೂ ಈ ಮನೆಯ ಜಂಟಿ ಮಾಲೀಕ. ನನಗೆ ಬಾಡಿಗೆ ಕೊಡದೇ ಇವರೆಲ್ಲಾ ಯಾಕೆ ವಾಸವಿದ್ದಾರೆ?' ಎಂದು ಗಲಾಟೆ ಆರಂಭಿಸಿದ್ದ.
ಈ ಸಂದರ್ಭದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಾಗ ಮಧ್ಯ ಪ್ರವೇಶಿಸಿದ್ದ ಗಣೇಶ್ ನಾಯ್ಕ್ ತಲೆಗೆ ನಾರಾಯಣ ದೊಣ್ಣೆಯಿಂದ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಗಣೇಶ್ ನಾಯ್ಕ್ ಸಾವನ್ನಪ್ಪಿದ್ದು, ಆರೋಪಿ ನಾರಾಯಣ ಪರಾರಿಯಾಗಿದ್ದಾನೆ. ಸದ್ಯ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬಂಧನಕ್ಕೆ ಶೋಧಕಾರ್ಯ ನಡೆಸಲಾಗುತ್ತಿದೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪೂರ್ಡ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಆಸ್ತಿ ವಿಚಾರಕ್ಕೆ ಸಹೋದರರ ಗಲಾಟೆ : ಆಸ್ತಿ ವಿಚಾರಕ್ಕೆ ಒಡಹುಟ್ಟಿದ ಅಣ್ಣ-ತಮ್ಮಂದಿರು ರಸ್ತೆಯಲ್ಲೇ ಗಲಾಟೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ (ಜುಲೈ 23-2023) ನಡೆದಿತ್ತು. ಮೆಳ್ಳೇಕಟ್ಟೆ ಗ್ರಾಮದ ನಿವಾಸಿಗಳಾದ ಸಿದ್ದೇಶ್ ಹಾಗೂ ಮಲ್ಲಿಕಾರ್ಜುನ ನಡುವೆ ಸಂಘರ್ಷ ಉಂಟಾಗಿತ್ತು. ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ದಾಖಲಾಗಿತ್ತು.
ತಾಯಿ ಹೆಸರಿನಲ್ಲಿರುವ ಅಡಿಕೆ ತೋಟವನ್ನು ತನ್ನ ಹೆರಿಗೆ ಮಾಡುವಂತೆ ಅಣ್ಣ ಸಿದ್ದೇಶ್, ತಮ್ಮ ಮಲ್ಲಿಕಾರ್ಜುನ್ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಈ ವೇಳೆ ಸಿದ್ದೇಶ್ ರಾಡ್ನಿಂದ ಸಹೋದರ ಮಲ್ಲಿಕಾರ್ಜುನ್ಗೆ ಹಲ್ಲೆ ನಡೆಸಲು ಮುಂದಾಗಿದ್ದ. ಇದಕ್ಕೂ ಮುನ್ನ ರಸ್ತೆ ಬದಿ ನಿಲ್ಲಿಸಿದ್ದ ಮಲ್ಲಿಕಾರ್ಜುನನ ಕಾರಿನ ಗ್ಲಾಸು ಒಡೆದು ಹಾಕಿದ್ದ. ಬಳಿಕ ಕಾರಿಗೆ ಬೆಂಕಿ ಇಟ್ಟಿದ್ದು, ಭಾಗಶಃ ಸುಟ್ಟು ಕರಕಲಾಗಿತ್ತು.
ಸಿದ್ದೇಶನು ಮಲ್ಲಿಕಾರ್ಜುನ್ ಕುಟುಂಬಸ್ಥರ ಮೇಲೂ ರಾಡ್ನಿಂದ ಹಲ್ಲೆ ನಡೆಸಿದ್ದ. ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಜ್ಜಿ ಮನೆಗಾಗಿ ಸಹೋದರರ ಹೊಡೆದಾಟ: ಅಜ್ಜಿ ಮನೆಗಾಗಿ ಸಹೋದರರಿಬ್ಬರ ನಡುವೆ ಮಾರಾಮಾರಿ ನಡೆದು, ಜಗಳ ಬಿಡಿಸಲು ಹೋದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (ಮಾರ್ಚ್- 1 -2021) ನಡೆದಿತ್ತು.
ಮಾಝು ಭೀ ಎಂಬ ವೃದ್ಧೆ ಕಳೆದ 20 ವರ್ಷಗಳಿಂದ ಕೆ.ಆರ್. ಪುರಂ ಸಮೀಪದ ವಿಜಾನಪುರ ವಾರ್ಡ್ನ ಅಂಬೇಡ್ಕರ್ ನಗರದಲ್ಲಿ ವಾಸಿಸುತ್ತಿದ್ದರು. ಈ ಘಟನೆಗೂ 15 ದಿನಗಳ ಹಿಂದೆ ಮೃತಪಟ್ಟಿದ್ದರು. ಈ ವೃದ್ಧೆಗೆ 6 ಜನ ಮಕ್ಕಳಿದ್ದು, ಅದರಲ್ಲಿ ಮೊದಲನೇ ಮಗ ಮುನಾವರ್ ಹಾಗೂ ಎರಡನೇ ಮಗ ಸೈಯದ್ ಮುನೀರ್ ನಡುವೆ ಅಂಬೇಡ್ಕರ್ ನಗರದ ಮನೆಯ ಜಾಗಕ್ಕಾಗಿ ಜಗಳ ನಡೆಯುತ್ತಿತ್ತು. ಇಬ್ಬರೂ ಕೂಡಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಜ್ಜಿ ಮನೆಗಾಗಿ ಸಹೋದರರ ಹೊಡೆದಾಟ; ಮಹಿಳೆಗೆ ಗಂಭೀರ ಗಾಯ