ಬೆಂಗಳೂರು : ಆ ಕಂದಮ್ಮ ಹುಟ್ಟುತ್ತಲೇ ಹೆತ್ತವರಿಂದ ದೂರವಾಗಿತ್ತು. ಕಳ್ಳತನವಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿದರೂ ಪೋಷಕರಿಗೆ ಒಪ್ಪಿಸಲು ಕಾನೂನು ತೊಡಕು ಉಂಟಾಗಿತ್ತು. ಇದೀಗ ನ್ಯಾಯಾಲಯದ ಅನುಮತಿ ಮೇರೆಗೆ ನಡೆಸಿದ ಡಿಎನ್ಎ ಪರೀಕ್ಷೆಯ ವರದಿ ಬಂದಿದ್ದು, ಪಾದರಾಯನಪುರ ನಿವಾಸಿ ಹುಸ್ನಾಬಾನು ದಂಪತಿಗೆ ಸೇರಿದ ಮಗು ಎಂದು ರುಜುವಾಗಿದೆ.
ಎಫ್ಎಸ್ಎಲ್ ಅಧಿಕಾರಿಗಳು ನೀಡಿದ ಡಿಎನ್‌ಐ ವರದಿಯನ್ನು ಹೈಕೋರ್ಟ್ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ದಕ್ಷಿಣ ವಿಭಾಗದ ಪೊಲೀಸರು ಒಪ್ಪಿಸಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆ ಮುಕ್ತಾಯದ ಬಳಿಕ ಕಾನೂನು ಪ್ರಕಾರ ಮಗು ಪೋಷಕರಿಗೆ ಹಸ್ತಾಂತರವಾಗಲಿದೆ.
ಈ ಬಗ್ಗೆ 'ಈಟಿವಿ ಭಾರತ'ಗೆ ಪ್ರತಿಕ್ರಿಯಿಸಿರುವ ಮಗುವಿನ ತಾಯಿ ಹುಸ್ನಾ ಭಾನು, ಡಿಎನ್ಎ ಪರೀಕ್ಷೆಯಲ್ಲಿ ನೈಜ ವರದಿ ಬಂದಿರುವುದು ಸಂತೋಷವಾಗಿದೆ. ಮಗು ಕಳ್ಳತನವಾದ ಕ್ಷಣದಿಂದ ವರದಿ ಬರುವವರೆಗೆ ನಾವು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ನ್ಯಾಯಾಲಯದ ಆದೇಶದ ಬಳಿಕ ಮಗು ನಮ್ಮ ಮಡಿಲಿಗೆ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ.
ಓದಿ : ವೈದ್ಯೆ ನವಜಾತ ಶಿಶು ಕದ್ದು ಮಾರಿದ್ದ ಪ್ರಕರಣ: ಮಗುವಿನ ಹೆತ್ತವರ ಪತ್ತೆಗೆ ಐವರ ಡಿಎನ್ಎ ಪರೀಕ್ಷೆ
ಮಗು ಕಳ್ಳತನ ಪ್ರಕರಣ ಸಂಬಂಧ ನಿಜವಾದ ಪೋಷಕರನ್ನು ಪತ್ತೆ ಹಚ್ಚುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಮಗು ಸೇರಿದಂತೆ ಐವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದು ವರ್ಷದ ಮಗು, ಚಾಮರಾಜಪೇಟೆಯ ಪಾದರಾಯನಪುರದ ದಂಪತಿ ಉಸ್ಮಾಬಾನು-ನವೀದ್ ಪಾಷಾ ಹಾಗೂ ಕೊಪ್ಪಳ ಮೂಲದ ದಂಪತಿಯನ್ನು ಪರೀಕ್ಷೆ ನಡೆಸಲಾಗಿತ್ತು. ರಕ್ತದ ಮಾದರಿ ಸೇರಿ ಡಿಎನ್ಎಗೆ ಬೇಕಾದ ಎಲ್ಲಾ ರೀತಿಯ ಸ್ಯಾಂಪಲ್ಗಳನ್ನು ಸಂಗ್ರಹಿಸಿದ ವೈದ್ಯರು, ಪೊಲೀಸರ ಸೂಚನೆಯಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದ್ದರು.
ಪ್ರಕರಣ ಹಿನ್ನೆಲೆ: ಬೆಂಗಳೂರಿನ ಪಾದರಾಯನಪುರದ ನಿವಾಸಿ ನವೀದ್ ಪಾಷ ಅವರ ಪತ್ನಿ ಹುಸ್ನಾಬಾನು 2020 ರ ಮೇ 29 ರಂದು ಚಾಮರಾಜಪೇಟೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ರಶ್ಮಿ ಮಗುವನ್ನು ಕದ್ದಿದ್ದಳು. ಕಳ್ಳತನವಾದ ದಿನದಂದೇ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದರು.
ಪ್ರಕರಣ ಆರೋಪಿ ಉತ್ತರ ಕರ್ನಾಟಕದ ಮೂಲದ ರಶ್ಮಿ ಕಳೆದ ಮಗುವನ್ನು ಕದ್ದು ಬೇರೆ ದಂಪತಿಗೆ ನೀಡಿ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಮನೋವೈದ್ಯೆಯಾಗಿದ್ದ ಈಕೆ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಓದಿ : ನವಜಾತ ಶಿಶು ಕದ್ದು 15 ಲಕ್ಷ ರೂ.ಗೆ ಮಾರಿದ್ದ ಖತರ್ನಾಕ್ ವೈದ್ಯೆ ಅರೆಸ್ಟ್
ವಿಜಯನಗರದ ನಿವಾಸಿಯಾಗಿದ್ದ ಈಕೆ 2014ರಲ್ಲಿ ಹುಬ್ಬಳ್ಳಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ದಂಪತಿ ಮಗಳಿಗೆ ಬುದ್ಧಿಮಾಂದ್ಯತೆ ಹಿನ್ನೆಲೆ ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು. ಹಾಗಾಗಿ, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ರಶ್ಮಿ ಒಂದು ಉಪಾಯ ಮಾಡಿ, ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ಹೇಳಿ ದಂಪತಿಯಿಂದ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಳು ಎನ್ನಲಾಗ್ತಿದೆ.
ಮೇ 29 ರಂದು ಚಾಮರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಆಟೊದಲ್ಲಿ ಬಂದು ಹುಸ್ನಾಬಾನುವಿನ ನವಜಾತ ಶಿಶುವನ್ನು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿದ್ದಳು.